Search This Blog

Tuesday, 29 September 2015

ನಿರಂತರ

ಏಕೆ ಹೀಗೆ ಆಡುತಿವೆ
ಕನವರಿಸುವ ಕನಸುಗಳು|
ನೆನೆದ ಮನವ ಕಾಡುತಿವೆ
ನೆಪ ಮಾತ್ರಕೆ ನೆನಪುಗಳು||

ಕಡಲ ತಡಿಯ ಮರಳ
ಗೂಡಿನಂತೆ ಕಡೆದ ಕನಸಿವೆ
ತಡಿಗೆ ಬಡಿವ ಅಲೆಗಳು
ಉಸುಕ ಗೂಡ ಹೊಸಕಿವೆ||

ಮಡುವಿನಲ್ಲಿ ನಿಂತ ನೀರು
ನೆನಪ ನೆನಪು ಮಾಡಿವೆ
ಸುತ್ತ ಸಿಡಿವ ಶಿಲೆಗಳು
ನೆನಪ ಕದಡಿ ಅಳಿಸಿವೆ||

ನೀರಲೆಗಳ ಹೊಯ್ದಾಟ
ಮನವ ಕಲಕಿನ ಕಲ್ಲಿನಾಟ
ಯಾರು ಬಲ್ಲರು ಯಾರ ಬಾಳನು
ಇದು ಬರೀ ವಿಧಿಯಾಟ||

ಮಂಜು ಮುಸುಕಿದ ದಾರಿ
ನಡೆಯಲಾಗದು ಮಾರುದೂರ
ಕನಸು ನೆನಪು ಒಟ್ಟು ಕೂಡಿರೆ
ಬದುಕ ಬಯಕೆ ನಿರಂತರ||

Wednesday, 9 September 2015

ಕವಿತೆ-ಒರತೆ

ದುಃಖತಪ್ತ ಹೃದಯಕೆ
ತಂಪೆರೆವ ಸಾಧನ|
ಸ್ನೇಹವೆಂಬ ಒಂದು ಹನಿ
ಸಿಹಿನೀರಿನ ಸಿಂಚನ||

ಬಯಸಿದ್ದು ಸ್ನೇಹದ 
ಸಿಹಿ ನೀರು|
ದೊರಕಿದ್ದು ಉಕ್ಕಿಬಹ
ಉಪ್ಪು ನೀರು||

ಸ್ನೇಹಭಾವದಿ ಕುಳಿತು
ಬರೆಯುತಿರೆ ಕವಿತೆ|
ಮಂಜಾದ ನಯನಗಳು
ಉಪ್ಪುನೀರಿನ ಒರತೆ||

ಗೆಳೆತನದ ಬಯಕೆಯಲಿ
ಮುಂದೆ ಕೈಚಾಚಿರೆ|
ಒಡ್ಡಿದ ಕರಗಳಿಗೆ
ಗಾಯವಾಗದ ಬರೆ||

ರವಿ-ಶಶಿಯರು ಮಂಕಾದರೂ
ಪೃಥ್ವಿಗೆ ಪ್ರಳಯವಾದರೂ|
ಹಸನಾಗಿರಲಿ ತವ ಜೀವನ
ಹರಸುವ ಹಾರೈಕೆ ಈ ಕವನ||

Tuesday, 8 September 2015

ಧಾರ್ಮಿಕತೆಯಲ್ಲಿ ವೈಜ್ಞಾನಿಕತೆಯ ತಳಕು!!?

       ಭೂಗ್ರಹದಲ್ಲಿ ಶತಶತಮಾನಗಳಿಂದ ಬದುಕುತ್ತಿರುವ ಮನುಷ್ಯನೆಂಬ ಜೀವಿ, ಇಂದು ಭೂಮಿಯ ವ್ಯಾಪ್ತಿಯನ್ನೂ ಮೀರಿ ಹೊರಟಿದ್ದಾನೆ. ವಿಜ್ಞಾನ ಸೌರವ್ಯೂಹದ ಎಲ್ಲೆಯನ್ನೂ ದಾಟಿ ಮುಂದರಿದಿದೆ. ಆದರೆ ವಿಜ್ಙಾನದ ಹುಮ್ಮಸ್ಸಿನಲ್ಲಿ ತಮ್ಮ ಪೂರ್ವವೃತ್ತಾಂತವೆಂಬುದು ಮರೆಯಾಗಿ ಹೋಗುತ್ತಿದೆ. ವಿಜ್ಞಾನದ ಅಪರಿಮಿತ ಬೆಳವಣಿಗೆ, ಅದೆಷ್ಟೋ ಶತಮಾನಗಳಿಂದ ಅವಿಚ್ಛಿನ್ನವಾಗಿ ರೂಢಿಸಿಕೊಂಡು ಬಂದ ಜೀವನಕ್ರಮವನ್ನೇ ಬದಲಾಯಿಸುವ ಪ್ರಕ್ರಿಯೆಗೆ ಮುಂದಾಗುತ್ತಿದೆ. ಪ್ರತಿ ದಶಕದಲ್ಲೂ ಮಾನವನ ಜೀವನ ಸುಲಭವಾಗುತ್ತಾ ಸಾಗುತ್ತಿದೆ. ಆದರೆ ಜೊತೆಜೊತೆಗೆ ಹುಟ್ಟುತ್ತಿರುವ ಹೊಸ ಸಮಸ್ಯೆಗಳ ಬಗ್ಗೆ ಜನರು ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ. ದಿನೇ ದಿನೇ ಮಾನವ ಸಹಜ ಗುಣಗಳು ಸಹ ಮಾಪರ್ಾಡು ಹೊಂದುತ್ತಿದೆ. ಹೊಸ ರೋಗ ರುಜಿನಗಳು ತಲೆ ಎತ್ತುತ್ತಿವೆ. ಮಾನಸಿಕ ಶಾಂತಿ ಕಡಿಮೆಯಾಗಹತ್ತಿದೆ. ಭೌದ್ಧಿಕ ಶಕ್ತಿ ಕುಂಠಿತವಾಗುತ್ತಿದೆ. ಸಾಮಾಜಿಕ ಜೀವನವೆಂಬುದು ಕೇವಲ ಹೆಸರಿಗಷ್ಟೇ ಸೀಮಿತವಾಗಿ, ವಿಚಾರಗಳು ಸಂಕುಚಿತಗೊಳ್ಳುತ್ತಿವೆ. ಇವೆಲ್ಲಾ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವುದರ ಜೊತೆಜೊತೆಗೆ, ಮುಂದಿನ ಪೀಳಿಗೆಯಲ್ಲಾಗಬಹುದಾದಂತ ದುರಂತಗಳ ಮುನ್ಸೂಚನೆಯನ್ನು ಸದ್ದಿಲ್ಲದೇ ನೀಡುತ್ತಿರುವಂತೆ ಭಾಸವಾಗುತ್ತಿದೆ. ಇನ್ನೂ ಈ ವಿಷಯವಾಗಿ ಗಂಭೀರವಾಗಿ ವಿಚಾರಿಸದಿದ್ದರೆ, ಮುಂದೆ ತಿರುಗಿ ನೋಡುವುದಷ್ಟಕ್ಕೆ ನಮ್ಮನ್ನು ಸೀಮಿತಗೊಳಿಸಬೇಕಾದೀತು.

       ಪ್ರಸ್ತುತದಲ್ಲಿ ವಿಜ್ಞಾನದ ಸೋಗಿನಲ್ಲಿ, ಧಾರ್ಮಿಕತೆಯನ್ನು ಅಲ್ಲಗಳೆಯುವ ಗುಂಪೇ ಹುಟ್ಟಿಕೊಂಡಿದೆ. ಧಾರ್ಮಿಕ ಆಚರಣೆಗಳನ್ನು ಟೀಕಿಸುವ, ಅದನ್ನು ಮುಗಿಸುವ ಹುನ್ನಾರ ನಡೆದಿದೆ. ಧರ್ಮವೆಂಬುದು ಸೀಮಿತವಾದ ಜನಾಂಗಕ್ಕಷ್ಟೇ ಒತ್ತು ಕೊಡುವ, ಅನುಕೂಲವಾದಿಗಳು ಹುಟ್ಟುಹಾಕಿದ ಪದ್ಧತಿಯೆಂಬಂತೆ ಬಿಂಬಿಸಲಾಗುತ್ತಿದೆ. ಆದರೆ ನೈಜತೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಧರ್ಮವೆಂಬುದು ಮಾನವನ ಸರ್ವತೋಮುಖ ಅಭಿವೃದ್ಧಿಗೆ ಅನಿವಾರ್ಯವಾದ ಜೀವನಕ್ರಮವೆಂದು ಸ್ಪಷ್ಟಪಡುತ್ತದೆ. ಧರ್ಮ ಮತ್ತು ಧಾರ್ಮಿಕ ಆಚರಣೆಗಳು ಅನೇಕ ಸಾಧು ಸಂತರ ನಿರಂತರ ಸಂಶೋಧನೆಯ ಅಂತಿಮ ಫಲಿತಾಂಶವೇ ಹೊರತು ಮತ್ತೇನಲ್ಲ. ಅವರ ಸಂಶೋಧನೆಯ ವಿಧಾನಗಳು ಭಿನ್ನವಾಗಿರಬಹುದು, ಆದರೆ ಅವುಗಳಿಂದ ಬಂದ ಫಲಿತಾಂಶ ಏಕರೂಪದ್ದು. ಬಹಳಷ್ಟು ಧರ್ಮಗಳನ್ನು ಕೂಲಂಕುಶವಾಗಿ ಗಮನಿಸಿದರೆ, ಧ್ಯಾನ ಅವಿಭಾಜ್ಯ ಅಂಗವಾಗಿ ಹೊರಹೊಮ್ಮುತ್ತದೆ. ಪೂರ್ವಜರ ಅಭಿಪ್ರಾಯದಂತೆ, ಧ್ಯಾನವೆಂದರೆ ಸಕಲ ದಿಕ್ಕುಗಳಿಂದಲೂ ಬರುತ್ತಿರುವ ಶಕ್ತಿಯನ್ನು ಕೇಂದ್ರೀಕರಿಸುವ ಸಾಧನ. ಆ ಶಕ್ತಿಯೇ ಮಾನವನ ಭೌತಿಕ, ಮಾನಸಿಕ ಮತ್ತು ಭೌದ್ಧಿಕ ಆರೋಗ್ಯಕ್ಕೆ ಸೋಪಾನ. ಅದೇ ರೀತಿಯಲ್ಲಿ ಬಹಳಷ್ಟು ಆಚರಣೆಗಳು ವಿವಿಧ ಧರ್ಮಗಳಲ್ಲಿ ಸಮಾನ ಸ್ಥಾನವನ್ನು ಪಡೆದುಕೊಂಡಿವೆ. ಧ್ಯಾನವೊಂದು ಉದಾಹರಣೆ ಅಷ್ಟೆ.

       ಧಾರ್ಮಿಕ ಆಚರಣೆಗಳು ಸುಖಾಸುಮ್ಮನೆ ರೂಢಿಗೆ ಬಂದದ್ದಲ್ಲ. ಅದೆಷ್ಟೋ ಸಂತರ ನಿರಂತರ ಸಂಶೋಧನೆಯಿಂದ ಉಳಿದವರಿಗೆ ಭೋಧಿನಲ್ಪಟ್ಟದ್ದು. ಅವರು ಆಚರಣೆಗಳನ್ನು ಹೇಳಿಕೊಟ್ಟರೇ ವಿನಃ ಅವುಗಳ ಹಿಂದಿರುವ ಕಾರಣಗಳನ್ನು ಸಾಮಾನ್ಯರಿಗೆ ತಿಳಿಯಪಡಿಸಿಲ್ಲ. ಅವೆಲ್ಲಾ ಪ್ರತಿಯೊಬ್ಬರ ಉನ್ನತಿಗೆ ಎಡೆಮಾಡಿಕೊಡುತ್ತವೆ ಎಂಬುದನ್ನು ಅವರು ಸಮರ್ಥಿಸಿದರು. ಅವುಗಳಿಂದ ಆಗಬಹುದಾದ ಒಳ್ಳೆಯ ಪರಿಣಾಮಗಳನ್ನು ತಿಳಿಯಪಡಿಸಿದರು.  ಆದರೆ ಕಾರಣಗಳನ್ನು ಸಾಮಾನ್ಯರಿಗೆ ತಿಳಿಸಿದರೂ ಅದು ಅವರಿಗೆ ಅನವಶ್ಯಕವೆಂದು ಭಾವಿಸಿದರೋ ಏನೋ. ಉದಾಹರಣೆಗೆ, ಒಬ್ಬ ಅವಿದ್ಯಾವಂತನಿಗೆ ವಿದ್ಯುತ್ ಪ್ರವಹಿಸುತ್ತಿರುವ ತಂತಿಯನ್ನು ಮುಟ್ಟಬಾರದು ಎಂದು ಸಲಹೆ ಕೊಡುಬಹುದು, ಅದೇ ಅವನಿಗೆ ಅದರ ಹಿಂದಿರುವ ಕಾರಣವನ್ನು ವಿವರಿಸಿ ಅರ್ಥಮಾಡಿಸುವುದು ಆ ಕ್ಷಣಕ್ಕೆ ಸುಲಭಸಾಧ್ಯವಲ್ಲ. ಅದಕ್ಕಾಗಿಯೇ ನಮ್ಮ ಪೂರ್ವಿಕರು ಕೇವಲ ಆಚರಣೆಗಳನ್ನಷ್ಟೇ ಭೋಧಿಸಿದ್ದಿರಬಹುದು. ಕಾರಣವನ್ನು ತಿಳಿಯುವ ಗೋಜಿಗೆ ಹೋಗದೇ ಕ್ರಮೇಣ ಆ ಆಚರಣೆಗಳು ಒಂದು ಸಂತತಿಯಿಂದ ಮುಂದಿನ ಸಂತತಿಗೆ ಮುಂದುವರಿದಂತೆ ತೋರುತ್ತದೆ. ಆಚರಣೆಗಳ ಹಿಂದಿನ ಕಾರಣಗಳ ಸಮರ್ಪಕ ವಿವರಣೆ ಇಲ್ಲದಿರುವುದು, ಧಾರ್ಮಿಕ ಆಚರಣೆಗಳು ಮೂಢನಂಬಿಕೆಗಳೆಂದು ಟೀಕಿಸುವ ಸ್ಥಿತಿ ನಿರ್ಮಾಣವಾಗಲು ಮೂಲಕಾರಣವಾಗಿದೆ ಎಂದು ನನ್ನ ಭಾವನೆ.  

       ಈ ನಿಟ್ಟಿನಲ್ಲಿ, ಕೆಲವು ಸರಳ ಧಾರ್ಮಿಕ ಆಚರಣೆಗಳ ಹಿಂದಿರಬಹುದಾದಂತ ವೈಜ್ಞಾನಿಕ ಮರ್ಮವನ್ನು ಚರ್ಚಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ. ಆಚರಣೆಗಳು ಕೇವಲ ಕ್ರಿಯೆಗಳಲ್ಲ, ಅವು ಜೀವನ ಕ್ರಮಗಳು. ಇಂಥ ಜೀವನಕ್ರಮದಿಂದ ಸರ್ವೋನ್ನತಿ ಸಾಧ್ಯ ಎಂಬುದೇ ಅದರ ಹಿಂದಿರುವ ರಹಸ್ಯರೂಪಿ ಸ್ವಾರಸ್ಯ. ಆ ರಹಸ್ಯಗಳನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ಶೋಧಿಸಿದರೆ, ಅವು ಒಂದೊಂದಾಗಿ ಮೈದೋರತೊಡಗುತ್ತವೆ. ನನಗನ್ನಿಸಿದಂತೆ, ಪ್ರತಿಯೊಂದು ಆಚರಣೆಗಳಿಗೂ ಅದರದೇ ಆದ ಶಕ್ತ ಕಾರಣಗಳಿವೆ. ಅವುಗಳನ್ನು ಹುಡುಕುವ ಯತ್ನ ಯಶಸ್ಸನ್ನು ಕಾಣಬೇಕಷ್ಟೆ.

       ವೈಜ್ಞಾನಿಕತೆಯಂತೆ, ಮಾನವನ ದೇಹದಲ್ಲಿ ಕಣ್ಣು, ಕಿವಿ, ನಾಲಿಗೆ, ನಾಸಿಕ ಮತ್ತು ಚರ್ಮಗಳನ್ನು ಪಂಚ ಜ್ಞಾನೇಂದ್ರಿಯಗಳೆಂದು ಗುರುತಿಸಿದ್ದಾರೆ. ಅಂದರೆ, ಜ್ಞಾನವನ್ನು ಸ್ವೀಕರಿಸುವ ಶಕ್ತಿಯುಳ್ಳ ಅಂಗಗಳು ಎಂಬರ್ಥ. ಇವು ಶಕ್ತಿಯ ಮೂಲಸ್ವರೂಪಗಳನ್ನು ಗುರುತಿಸುವ ಮತ್ತು ಮಾಪಿಸುವ ನೈಸರ್ಗಿಕ ಸಾಧನದಂತೆ ವರ್ತಿಸುತ್ತವೆ. ನೇತ್ರಗಳು ಬೆಳಕಿನ ಶಕ್ತಿಯನ್ನು ಗುರುತಿಸಿದರೆ, ಕರ್ಣಗಳು ಶಬ್ದಶಕ್ತಿಗೆ ಸಂಬಂಧಿಸಿವೆ. ಜಿಹ್ವೆಯು ರಸಾನುಭವವನ್ನು ಪ್ರಚುರಪಡಿಸಿದರೆ, ನಾಸಿಕವು ಗಂಧವನ್ನು ಮಾರುತದ ಮೂಲಕ ಗುರುತು ಹಚ್ಚುತ್ತದೆ. ಚರ್ಮೇಂದ್ರಿಯವು ವಾಯುಶಕ್ತಿಯಿಂದ ಸ್ಪರ್ಶವನ್ನೂ, ಉಷ್ಣಶಕ್ತಿಯನ್ನೂ ಸಂವೇದಿಸುತ್ತದೆ. ಈ ಶಕ್ತಿಗಳೇ ಮಾನವನ ದಿನನಿತ್ಯದ ಚಲನೆ, ಕೆಲಸ ಕಾರ್ಯಗಳಿಗೆ ಅತ್ಯವಶ್ಯಕ. ಯಾವೊಂದು ಶಕ್ತಿ ಏರುಪೇರಾದರೂ ಮನುಷ್ಯ ಏಕರೂಪಿಯಾಗಿ ಜೀವಿಸಲು ಅಸಾಧ್ಯ. ಶಾಸ್ತ್ರದಲ್ಲಿ, ಪ್ರಪಂಚವು ಅಗ್ನಿ, ಜಲ, ವಾಯು, ಭೂಮಿ ಮತ್ತು ಆಕಾಶಗಳೆಂಬ ಪಂಚಮಹಾಭೂತಗಳಿಂದಾಗಿದೆ ಎಂಬುದಾಗಿ ಹೇಳಲ್ಪಟ್ಟಿದೆ. ಈ ಪಂಚಭೂತಗಳಿಗೂ, ಪಂಚೇಂದ್ರಿಯಗಳಿಗೂ ನೇರವಾದ ಸಂಬಂಧ ಕಲ್ಪಿಸಬಹುದು. ಅಗ್ನಿ (Light energy) ಬೆಳಕಿನ ಪ್ರತೀಕವಾಗಿ ನೇತ್ರಗಳಿಗೆ ದೃಶ್ಯಜ್ಞಾನವನ್ನು ನೀಡುತ್ತದೆ. ಜಲವು (Chemical energy) ನಾಲಿಗೆಗೆ ರಸಜ್ಞಾನವನ್ನು ಉಣಬಡಿಸುತ್ತದೆ. ವಾಯುವಿನ (Heat energy) ಮುಖಾಂತರ ಚರ್ಮವು ಸ್ಪರ್ಶಜ್ಞಾನವನ್ನು ಅನುಭವಿಸುತ್ತದೆ. ಕಿವಿಗಳು ಶ್ರವಣಜ್ಞಾನವನ್ನು (Sound Energy) ಸ್ವೀಕರಿಸುತ್ತವೆ. ಭೂಮಿಯು ಗಂಧದ (wind energy) ಸಂಕೇತವಾಗಿ ನಾಸಿಕಕ್ಕೆ ಸಂಬಂಧಿಸಿದೆ. ಆಕಾಶ ಈ ಎಲ್ಲ ಜ್ಞಾನಗಳ ಏಕೀಕರಣಕ್ಕೆ ಮಾಧ್ಯಮದಂತೆ (Medium of unification - ether) ವರ್ತಿಸುತ್ತದೆ, ಅಲ್ಲದೆ ಶಾಖಶಕ್ತಿಯನ್ನೂ ಸಹ ಪಸರಿಸುತ್ತದೆ. ಆಕಾಶವೆಂಬುದಿಲ್ಲದಿದ್ದರೆ, ಈ ಶಕ್ತಿಗಳ ಪ್ರಸರಣ ಕಷ್ಟಸಾಧ್ಯವಾಗಿ ಪರಿಣಮಿಸುತ್ತದೆ. ಈ ಶಕ್ತಿಗಳನ್ನು ಸಮರ್ಪಕವಾಗಿ ಸ್ವೀಕರಿಸಲು ಶಕ್ತವಾದಂತ ದೇಹದಲ್ಲಿ ಪ್ರಾಣವೆಂಬ ಶಕ್ತಿ ಕೇಂದ್ರೀಕರಣ ವ್ಯವಸ್ಥೆಯಿರುತ್ತದೆ. ಯಾವಾಗ ಈ ವ್ಯವಸ್ಥೆ ಶಿಥಿಲವಾಗುತ್ತದೆಯೋ, ಆಗ ದೇಹ ಶವವಾಗಿ ಮಾರ್ಪಟ್ಟು, ಇದೇ ಪಂಚಭೂತಗಳಲ್ಲಿ ಲೀನವಾಗುತ್ತದೆ. ಆದ್ದರಿಂದ ಧಾರ್ಮಿಕ ನಂಬಿಕೆಗಳಲ್ಲಿ ಪಂಚಭೂತಗಳನ್ನು ಉಲ್ಲೇಖಿಸಿದ್ದರೆ, ವಿಜ್ಞಾನದಲ್ಲಿ ಪಂಚೇಂದ್ರಿಯಗಳ ಬಗ್ಗೆ ವಿವರಿಸಲ್ಪಟ್ಟಿದೆ.

       ವೇದಗಳ ಪ್ರಕಾರ ಶಕ್ತಿಯೆಂಬುದು ಅನಂತ, ಅದು ಸಕಲ ದಿಕ್ಕುಗಳಿಗೂ ನಿರಂತರವಾಗಿ ಪ್ರಸರಣವಾಗುತ್ತಾ ಇರುತ್ತದೆ. ಶಕ್ತಿಯನ್ನು ನಾವು ಇಂದ್ರಿಯಗಳ ಮೂಲಕ ಹೀರಿಕೊಂಡರೆ, ಅದು ನಮ್ಮ ದೇಹದ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕಾಗಿ, ನಮ್ಮ ಪಂಚೇಂದ್ರಿಯಗಳು ಸದಾಕಾಲ ಜಾಗೃತವಾಗಿರಬೇಕು. ದೇವಾಲಯಗಳಲ್ಲಿನ ಸಂಪ್ರದಾಯಗಳನ್ನು ಸ್ವಲ್ಪ ಸೂಕ್ಷ್ಮವಾಗಿ ಗ್ರಹಿಸಿದರೆ, ಅವು ಇಂದ್ರಿಯ ಜಾಗೃತಿಗೆ ಪೂರಕವಾಗಿರುವಂತೆ ತೋರುತ್ತವೆ. ದೇವರಿಗೆ ಬೆಳಗುವ ಆರತಿ, ಕಣ್ಣುಗಳಗೆ ಶಕ್ತಿಯನ್ನು ಪೂರೈಸುತ್ತಿದ್ದರೆ, ಘಂಟಾನಾದ ಕಿವಿಯನ್ನು ಜಾಗೃತವಾಗಿಸುತ್ತವೆ. ಸುಮಪ್ರಸಾದವು ನಾಸಿಕಕ್ಕೆ ಕೆಲಸ ಕೊಡುತ್ತಾ ಸುಗಂಧದ ಆಹ್ಲಾದಕತೆಯನ್ನು ಪೂಸುತ್ತದೆ. ಜಲಭರಿತ ತೀರ್ಥ ಜಿಹ್ವೆಯ ರಸಗ್ರಹಿಕೆಯ ಶಕ್ತಿಯ ಪರೀಕ್ಷೆಯನ್ನು ಮಾಡುತ್ತದೆ. ಆರತಿಯ ಶಾಖವನ್ನು ಹತ್ತಿರದಿಂದ ಕೈಗಳಿಂದ ಸ್ವೀಕರಿಸುವ ಮುಖೇನ ಚರ್ಮವೂ ತನ್ನ ಕಾಯಕವನ್ನು ಜಾಗೃತವಾಗಿರಿಸಿಕೊಳ್ಳತ್ತದೆ. ಒಂದು ವಿಧದಲ್ಲಿ ಈ ಕ್ರಮಗಳು ಯಾವುದೇ ಸಮಯದಲ್ಲಿ, ಯಾವ ರೂಪದಲ್ಲಿ ಶಕ್ತಿಯ ಆಗಮನವಾದರೂ, ಅದನ್ನು ಕ್ಷಣದಲ್ಲೇ ಗ್ರಹಿಸಿ ಹಿಡಿದಿಟ್ಟುಕೊಳ್ಳಲು ದೇಹವನ್ನು ತಯಾರು ಮಾಡುವಲ್ಲಿ ಪೂರಕವಾದಂತೆ ಕಾಣುತ್ತವೆ. ಮುಂದಿನ ಹಂತದಲ್ಲಿ ಎಲ್ಲ ಶಕ್ತಿಗಳನ್ನೂ ಕ್ರೋಢೀಕರಿಸಿ, ದೇಹದ ಆರೋಗ್ಯವನ್ನೂ, ಮಾನಸಿಕ ಶಾಂತಿಯನ್ನೂ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರೇರಣೆಯಾಗುತ್ತವೆ.

       ಇದೇ ತೆರನಾಗಿ, ಸಕಲ ಧರ್ಮಾಚರಣೆಗಳಿಗೂ ಕಾರಣಗಳಿದ್ದಿರಲೇ ಬೇಕು. ಅವುಗಳನ್ನು ಶೋಧಿಸುವ ಕಾರ್ಯಕ್ಕೆ ಮುಂದಾಗೋಣ. ಪಾಶ್ಚಿಮಾತ್ಯರ ಪ್ರಭಾವದಲ್ಲಿ ನಿಧಾನವಾಗಿ ತೆರೆಮರೆಗೆ ಸರಿಯುತ್ತಿರುವ ಧಾರ್ಮಿಕ ವಿಧಿವಿಧಾನಗಳಿಗೆ ವೈಜ್ಞಾನಿಕ ಕಾರಣಗಳನ್ನು ಹುಡುಕಿ, ಧರ್ಮ ಇಂದಿನ ವಿಜ್ಞಾನಕ್ಕಿಂತ ಮುಂದುವರಿದ ವಿಜ್ಞಾನ ಎಂಬ ನಿಜವನ್ನು ಸಾರುವಲ್ಲಿ ಹೆಜ್ಜೆಯಿಡೋಣ.  

Monday, 17 August 2015

Its the right Time to Think about the "TIME"

       Yes, it is the right time to think about the time. Knowing the time and proper utilization of time is very important not only for students but also for all. We are living in a fast and running world. Day by day life style is changing, it has become necessary to adapt ourselves to this running world. Everyone is running with running time. But time is not accelerating. Time mismanagement has created this feeling in us. If we too start running with others, it is none other than foolish thing. Instead of that it will be the very best option to manage the time. Then we can walk with the time.

          On each day we need to do several task. We need to give justice to every one of them. Then only, we can see the face of success in our life. Therefore, there is no doubt that time management is platform for successful life and discussion of time management is the interesting subject to debate on.

          Great Mother Theresa said “Yesterday is gone. Tomorrow has not yet come. We have only today. Let us begin.” Time is not stoppable. Present time is the only time we can utilize. Time sliding towards past doesn’t have any significance. But it is precious. Once you lost it, it will not come in our hand. There is a one saying, time and tide come once, they will not return back. So, one has to plan to use the time properly before it comes. This is very much needed skill for every student. Using the available time for productive work is one of the best habit of good student. Then how can we cultivate and improve this habit?

          For this I have four point plan. First you prepare to do list just for two days. Take the work of first priority today. Chose the work wisely in making the list.
          Second step is preplanning. Best way of preplanning is to prepare the time table for two days of our work. This time table should include time for study, home work, playing, entertainment, sleeping and free time also. Divide the time according to the importance of the task. Allot the time for study and home work as per your requirement. For sleeping mark at least 6 to 7 hours which is best for health. Do not work till late night, just postpone it. But be prepared for the next day.
          Next step is implementation of time table. Try to complete the work within stipulated time. But don’t forget to do the work completely and correctly. Don’t be hurry if some work wants more time, now use the free time you marked. During this don’t forget that completion of work is not our intention, productivity of work is our goal. If you complete any work before your expectation, it is better to start next one with small time gap. It gives you more free time for extra activities. Scientist Benjamin Franklin truly said, you may delay, but time will not. Postponing the work is foolish thinking.
          Fourth point is analysis of above three. After two days decide and think about the success and failures of fore said steps and improve the technique for the next coming days. Day by day these four step should be improved.
          In our life everything is equally important. Study, entertainment, social life, enjoying with family all we need. Give small gap within study and homework and enjoy. Refresh yourself and return. Concentrate on work, then we can complete quickly and it saves time too. It is possible to grasp more by concentrating in reading. Listening to the teacher in the classes help us to understand the subject and less reading will be sufficient later. Final words are “concentrate on present work, it saves the time for future and improves the efficiency.”

          Friends, this time is friendly, try to go with the time and time will become your friend.

Thursday, 6 August 2015

ನಿನದೇ ನೆನಪು ದಿನವೂ ಮನದಲ್ಲಿ....


ಮಳೆಗಾಲದ ತಂಪಾದ ಸಂಜೆ. ಜೋರು ಮಳೆಯ ನಡುವೆ ಸುಮ್ಮನೆ ರೇಡಿಯೋ ಕಿವಿಯನ್ನು ತಿರುವಿದೆ. ರೇಡಿಯೋ ಹಾಕಿದಾಕ್ಷಣ ಕೇಳಿದ ಧ್ವನಿ ಪಿ.ಬಿ. ಶ್ರೀನಿವಾಸ್ ಅವರದು. ಆ ಕಂಚಿನ ಕಂಠದಿಂದ ಹೊರಹೊಮ್ಮಿದ ಪ್ರತಿ ಸಾಲೂ ಹೃದಯದ ಕದ ತಟ್ಟಿತು. ಮನಸಿನ ಪ್ರತಿ ಪುಟದಲ್ಲೂ ಹಿನ್ನೆಲೆಯಾಗಿ ನಿಂತಿರುವ ನಿನ್ನ ಸಣ್ಣ ಚಿತ್ರವೊಂದು ಸ್ಪಷ್ಟವಾಗುತ್ತಾ ಹೋಯಿತು. ನೆನಪಿನ ಈ ಹಾಡು ಹಳೆಯ ಕನಸಿನ ಅರ್ಥವನ್ನು ಹುಡುಕತೊಡಗಿತು. ತನಗರಿವಿಲ್ಲದಂತೆ ತುಟಿಗಳು ಆ ಸಾಲುಗಳನ್ನು ಪದೇ ಪದೇ ಗುನುಗತೊಡಗಿದವು. ಮನಸ್ಸು ಅದಕ್ಕೆ ಉತ್ತೇಜನ ನೀಡಿತು. ಹಾಡಿನ ಪ್ರತಿ ಸಾಲು ನೀನು ಕೇಳಿದರೆ ಎಷ್ಟು ಚಂದ ಎಂದು ಮನ ತೊದಲತೊಡಗಿತು. ಹೃದಯ ಕಲ್ಪನೆಗೆ ಮೊರೆಹೋಯಿತು. ವಾಸ್ತವತೆಗೆ ಅತಿ ಹತ್ತಿರದ ಕಾಲ್ಪನಿಕತೆಯನ್ನು ಹುಟ್ಟುಹಾಕಿತು. ತಕ್ಷಣ ಎಲ್ಲೆಲ್ಲೋ ಹೋಗಿ ಬಂದ ಅನುಭವವಾಗತೊಡಗಿತು. ನೀನು ನನ್ನನ್ನು ವೀಕ್ಷಿಸುತ್ತಿರುವಂತೆ ಭಾಸವಾಗತೊಡಗಿತು. ಕಿವಿಯಲ್ಲೊಂದು ಸಣ್ಣ ಪಿಸುಮಾತೊಂದು ಹಾದುಹೋಯಿತು. ಬೆರಳುಗಳನ್ನು ತೀಡಿ ಮುಂದೆ ಕರೆದಂತಾಯಿತು. ಅದೇಕೋ ಕ್ಷಣದಲ್ಲೇ ವಾಸ್ತವ ಮತ್ತೆ ವಿರಾಜಿಸಿತು. ಕಾಲ್ಪನಿಕ ಲೋಕ ಥಟ್ಟನೆ ಮಾಯವಾಗಿಹೋಯಿತು. ಯಾಕೆ ಈ ಕಣ್ಣಾಮುಚ್ಚಾಲೆ ಆಟ? ನೈಜತೆಯನ್ನೇ ಹೋಲುವ ಇಂಥ ಕಲ್ಪನೆ ಯಾಕಾದರೂ ಬಂತು? ಹೌದು, ಇಂಥದ್ದೊಂದು ಕನಸನ್ನು ನಾ ಕಂಡಿದ್ದೇನೆಯೇ? ಅಂಥ ಘಟನೆಯೊಂದು ನನ್ನ ಬದುಕಲ್ಲಿ ನಡಿದಿದೆಯೇ? ಸಮರ್ಪಕ ಉತ್ತರ ಯಾವಾಗಲೂ ಹೊಳೆದಿಲ್ಲ. ಕೇವಲ ಕನಸುಗಳನ್ನೇ ಕಟ್ಟುತ್ತಾ ಬದುಕುತ್ತಿರುವ ನನಗೆ ನಿನ್ನ ಮನಸ್ಸಿನ ಭಾವ ಅರ್ಥವಾದರೆ ಅದೇ ಉತ್ತರ ನೀಡುವಲ್ಲಿ ಸಫಲವಾದೀತು. ಆದರೆ ನಿನ್ನ ಮನಸ್ಸಿನ ಒಂದು ಭಾಗವನ್ನೂ ಸಹ ಅಥರ್ೈಸಿಕೊಂಡು ಅದಕ್ಕೊಂದು ರೂಪ ಕೊಡುವ ಕೆಲಸ ಒಗಟಾಗಿ ಪರಿಣಮಿಸಿರುವುದೇ ನನಗೆ ಮತ್ತೆ ಮತ್ತೆ ಕಾಡುವ ಈ ಒಂದೇ ಒಂದು ಸಮಸ್ಯೆ. ಉತ್ತರದ ಹುಡುಕಾಟದಲ್ಲಿ ನಿನ್ನ ನೆನಪುಗಳನ್ನು ಕೆದಕಿ ನೋಡೋಣವೇ?

ಅಂದು ನಾನು ನಿನಗೆ ಕೇಳಿದ್ದು ಕೇವಲ ಒಂದೇ ಪ್ರಶ್ನೆ ಅಲ್ಲವೇ? ಆದರೆ ನನಗೆ ನಾನೇ ಕೇಳಿಕೊಂಡ ಪ್ರಶ್ನೆಗಳು ಅಪರಿಮಿತ. ಯಾವುದಕ್ಕೂ ಉತ್ತರವಿಲ್ಲ. ನಿನ್ನ ಉತ್ತರಕ್ಕಾಗಿ ನಾನು ಕಾಯಬೇಕಿತ್ತು. ನಾ ಮಾಡಿದ ಸಣ್ಣ ತಪ್ಪೇನೆಂದರೆ, ನಿನ್ನ ಉತ್ತರವನ್ನು ಕಲ್ಪಿಸಿಕೊಂಡಿದ್ದು. ಆ ಕಲ್ಪನೆ ನಿನ್ನ ಉತ್ತರದ ವಿರುದ್ಧವಾಗಿದ್ದರಿಂದಲೇ, ನನ್ನ ಕಲ್ಪನೆಗಳು ಕೈಗೆಟುಗದ  ಶಶಿಯಂತೆ ಕಾಣುತ್ತಿರುವುದು. ಆ ಕಲ್ಪನೆಯೇ ಕೆಲವೊಮ್ಮೆ ಇಡೀ ದಿಗಂತವನ್ನೇ ತುಂಬಿ ಬೆಳಗಿ, ಮತ್ತೊಮ್ಮೆ ಮಾಯವಾಗಿ ಗಾಢಾಂಧಕಾರವನ್ನು ತುಂಬುತ್ತಿರುವುದು. ನಮ್ಮ ಕಲ್ಪನೆಗೆ ತಕ್ಕಂತೆ ಎಲ್ಲವೂ ಸಾಗಿದರೆ, ಯಾರಿಗೂ ಕೂಡಾ ದುಖಃ ಎನ್ನುವುದೇ ಇರುತ್ತಿರಲಿಲ್ಲ. ನಿಜ, ನನ್ನ ಭ್ರಮೆಯೇ ನಿನ್ನ ವಿಚಾರವೂ ಆಗಬೇಕೆಂದೇನೂ ಇಲ್ಲವಲ್ಲ. ಅದನ್ನು ವಿಮಶರ್ಿಸಿಯೇ ನಾನು ನಿರ್ಣಯಕ್ಕೆ ಬರಬೇಕಿತ್ತು. ಎದುರು ಕಂಡ ಬೆಳಕನ್ನು ಕಂಡು ಮರೆಯಾಗುವವರೆಗೆ ಭ್ರಮಿಸಿ, ಅದು ಮರೆಯಾದ ನಂತರ ಕತ್ತಲೆಯಲ್ಲಿ ತಡಕಾಡಿದಂತಾಯಿತು ನನ್ನ ಪರಿಸ್ಥಿತಿ. ನೀ ಹತ್ತಿರವಿದ್ದಾಗ ನಿರ್ಧರಿಸಬೇಕಾದವಗಳನ್ನು ಕೇವಲ ಕಲ್ಪನೆಗೇ ಕೊನೆಗೊಳಿಸಿ, ನೀ ದೂರ ಹೋದ ಮೇಲೆ ಅದಕ್ಕಾಗಿ ಹಂಬಲಿಸಿದರೆ ತಪ್ಪಾದೀತಲ್ಲವೇ? ಇದು ಕೇವಲ ವ್ಯರ್ಥ ಪ್ರಲಾಪವಾದೀತು. ಸುಪ್ತ ಮನಸ್ಸು, ಜಾಗೃತ ಬುದ್ಧಿಯ ಮಾತು ಕೇಳಲೊಲ್ಲದು. ಮನಸ್ಸು ತನ್ನನ್ನು ತಾನೇ ಸಮಾಧಾನ ಮಾಡಿಕೊಳ್ಳುವ ನೆಪದಲ್ಲಿ ನಿನ್ನನ್ನು ಚಿತ್ತಪಟಲದಿಂದ ತೆಗೆದುಹಾಕುವ ಯೋಚನೆ ಮಾಡುವುದು. ಮತ್ತೆ ಮತ್ತೆ ಆಗದ ಕೆಲಸಕ್ಕೆ ಕೈ ಹಾಕಿ, ಕೈಚೆಲ್ಲುವುದು. ತಿರುಗಿ ಬಾರದ ಸಮಯವನ್ನೂ ಲೆಕ್ಕಿಸದೇ ಮತ್ತೆ ಪ್ರಯತ್ನ ಮಾಡುವುದು. ಫಲ ಗೊತ್ತಿದ್ದರೂ ಪದೇ ಪದೇ ತನ್ನನ್ನು ತಾನೇ ನೋಯಿಸಿಕೊಳ್ಳುವುದು. ಇದೇ ಆಗಿಬಿಟ್ಟಿದೆ ಮನಸಿನ ಕೆಲಸ. ನೀನೆದುರಿಗೆ ನಿಂದ ಆ ಕ್ಷಣದಲ್ಲಿ ಮನಸ್ಸು ತಪ್ಪು ಮಾಡಿತೇ? ಇಲ್ಲವಾದರೆ ಬುದ್ಧಿಗೆ ಮಂಕು ಬಡಿಯಿತೇ? ಮನಸ್ಸಿಗೂ, ಬುದ್ಧಿಗೂ ಜಗಳವಾಗಿದೆಯೇ ವಿನಃ ಫಲಿತಾಂಶ ಹೊರಬಂದಿಲ್ಲ.

ಮಳೆಗಾಲದ ಒಂದು ದಿನ. ನಿನ್ನ ಕೈಯಲ್ಲಿ ಛತ್ರಿ, ಹೆಗಲಿಗೊಂದು ಸಣ್ಣ ಬ್ಯಾಗ್. ಮೊಗ ಕೊಂಚ ಬಾಗಿತ್ತು. ಗೆಳತಿಯ ಜೊತೆ ಹೆಜ್ಜೆ ಹಾಕುತ್ತಿದ್ದೆ. ಅನತಿ ದೂರದಿಂದಲೇ ನನ್ನ ನೋಟ ನಿನ್ನೆಡೆಗೆ ಹರಿದಿತ್ತು. ನಾ ಎದುರಿನಿಂದ ಹತ್ತಿರ ಬರುತ್ತಿದ್ದಂತೆಂಯೇ ನೀನು ಗೆಳತಿಯ ಹಿಂದೆ ನಿಂತುಬಿಟ್ಟೆ. ನನ್ನೊಡನೆ ತುಂಬ ಸಲುಗೆಯಿದ್ದರೂ, ನಿನ್ನ ಮೊಗದಲ್ಲಿ ಸಂಕೋಚ ಎದ್ದು ಕಾಣುತ್ತಿತ್ತು. ನಮ್ಮ ಆತ್ಮೀಯತೆಯು, ಎರಡು ಜೀವನಗಳನ್ನು ಒಂದಾಗಿಸಿದರೆ ಚಂದ ಅಲ್ಲವೇ? ಎಂದು ಎರಡು ದಿನಗಳ ಹಿಂದೆ ನಾನಿಟ್ಟ ಪ್ರಶ್ನೆಗೆ ನಿನ್ನ ಉತ್ತರ ಸಿಗತ್ತದೆ ಎಂಬ ಕಾರತದಲ್ಲಿದ್ದ ನನಗೆ ನಿರಾಶೆ ಕಾದಿತ್ತು. 
ನಾನಾಡಿದ ಮಾತಿಗೆಲ್ಲಾ ನಗುಸಹಿತ ಪ್ರತಿಕ್ರಿಯೆ ನೀಡಿದರೂ ನನಗೆ ಉತ್ತರ ಸಿಗಲಿಲ್ಲ. ಗಡಿಬಿಡಿಯಲ್ಲೇ ಹೊರಡಲನುವಾದ ನಿನ್ನ ಕೋಮಲ ಪಾದಕ್ಕೆ ಬೆಣಚು ಕಲ್ಲೊಂದು ಚುಂಬಿಸಿದ್ದು? ಆ ನಿಜರ್ೀವ ಕಲ್ಲಿಗೂ ನಿನ್ನ ತಡೆದು ನಿಲ್ಲಿಸುವ ಆಸೆಯಾಗಿರಬೇಕು. ನೀ ಅದನ್ನು ಲೆಕ್ಕಿಸಲಿಲ್ಲ. ತಿರುಗಿ ನೋಡಲಿಲ್ಲ. ನಾನು ನಿಂತ ಕಲ್ಲಾದೆ. ದೇಹ ನಿಶ್ಚಲವಾದರೂ ಮನಸ್ಸು ನಿರಂತರ ತೊಯ್ದಾಟಕ್ಕೆ ಎಡೆಯಾಯಿತು. ನನ್ನ ಪ್ರಪಂಚದ ಪರಿಧಿಯೊಳಗೆ ನಿನ್ನನ್ನು ಬಂಧಿಸಿ, ಆ ಪ್ರಪಂಚದ ಒಡೆತನವನ್ನು ನಿನಗೊಪ್ಪಿಸಬೇಕು ಎಂಬ ನನ್ನ ಆಸಗೆ, ನೀನು ನಿನ್ನ ಆಸೆಯನ್ನು ಸೇರಿಸುವ ಅಭಿಲಾಷೆಯನ್ನು ವ್ಯಕ್ತಪಡಿಸಲಿಲ್ಲ. ಕಲ್ಲು ನಿನ್ನ ಚಲನೆಗೆ ವಿರೋಧ ಒಡ್ಡಿತು, ನೀನದನ್ನು ಕಡೆಗಣಿಸಿದೆ. ನಾನು ನಿನ್ನನ್ನು ಕೈಹಿಡಿದು ಮುನ್ನಡೆಸಲು ಬಯಸಿದೆ, ನೀನದನ್ನು ಅನವಶ್ಯಕವೆಂದು ಭಾವಿಸಿದೆ. ನಿನ್ನ ಮೌನ ನಡಿಗೆ ಕಂಡು ಆ ನಿಜರ್ೀವ ಕಲ್ಲು ನನ್ನನ್ನು ಅಣಕಿಸಿದಂತೆ ತೋರಿತು. ವರ್ಷಗಳಿಂದ ಒಡನಾಡಿರುವ ನಾನೂ, ಆ ಅಸ್ತಿತ್ವ ಇರದ ಕಲ್ಲೂ ನಿನಗೆ ಒಂದೇ ಆಗಿಬಿಟ್ಟವಲ್ಲ.

ಅಂದೇ ಕೊನೆ, ನಿನ್ನ ಮಧುರ ಸ್ವರವನ್ನು ನಾ ಕೇಳಿಲ್ಲ. ನೀ ಎಲ್ಲಿ ಕಂಡರೂ ನನ್ನ ಜೊತೆ ಮಾತಾಡುವೆಯೆಂದು ನಿರೀಕ್ಷೆಯಲ್ಲಿ ನಾನಿದ್ದರೆ, ಪರಿಚಯವೇ ಇಲ್ಲವೆಂಬಂತೆ ಮುಖ ತಿರುಗಿಸಿಕೊಂಡು ನಡೆವ ನಿನ್ನ ಭಾವವೇ ನನಗರ್ಥವಾಗುತ್ತಿಲ್ಲ. ನೀ ಬರುವೆ, ಮಾತಾಡುವೆ ಎಂದು ಕರ್ಣಗಳು ನಿನ್ನ ಗೆಜ್ಜೆಸದ್ದಿಗಾಗಿಯೇ ಕಾಯ್ದರೆ, ನಿನ್ನ ಮೋಹಕ ನಯನಗಳನ್ನು ದೃಷ್ಟಿಸುವಾಸೆಯಿಂದ ಕಣ್ಣುಗಳು ಕಾಯಿತ್ತಿವೆ. ಆದರೆ ಈವರೆಗೂ ಕಣ್ಣು-ಕರ್ಣಗಳು ಜೊತೆಗಿದ್ದು ಒಂದಕ್ಕೊಂದು ಸಾಂತ್ವನ ಹೇಳಿಕೊಳ್ಳುತ್ತಲೇ ಇವೆ. ಯಾಕೆ ಹೀಗಾಗಿಹೋಯಿತು?
 ನಿನ್ನ ಸೌಮ್ಯಭಾವ, ತಾಳ್ಮೆಯ ಗುಣ, ಎಲ್ಲರ ಜೊತೆ ನಗುನಗುತ್ತಾ ಮಾತಾಡುವ ಅಹಂಕಾರರಹಿತ ಪರಿ, ಸಹಾಯಕ್ಕೆ ಮುಂದಿಟ್ಟ ಹೆಜ್ಜೆ, ಹೃದಯ ವೈಶಾಲ್ಯತೆ ಇವೆಲ್ಲವೂ ನಿನ್ನೆಡೆಗೆ ನೋಡುವಂತೆ ಮಾಡಿತು. ನನ್ನ ನಿನ್ನ ನಡುವೆ ನಗುವಿನ ವಿನಿಮಯಗಳು, ನಗುವಿನ ಕಡಲನ್ನೇ ಸೂರೆಗೊಳ್ಳಲು ಹಂಬಲಿಸುವಂತೆ ಮಾಡಿತು. ಒಬ್ಬರನ್ನೊಬ್ಬರು ನೋಡಿದಾಗಲೆಲ್ಲ ನಿನ್ನ ಕಣ್ಣುಗಳು ನನ್ನ ಕಣ್ಣುಗಳಿಗೆ ಸ್ಪಧರ್ಿಸಿದ ರೀತಿ ನನ್ನನ್ನು ಮರುಳು ಮಾಡಿಬಿಟ್ಟಿತು. ಆದರೆ ನನ್ನ ಭಾವನೆಗಳನ್ನು ನಿನಗೆ ಹೇಳಿದ್ದೇ ತಪ್ಪಾಯಿತೇ? ಅಥವಾ ಅದನ್ನು ನೀನು ಅರ್ಥ ಮಾಡಿಕೊಂಡ ರೀತಿಯೇ ತಪ್ಪಾಯಿತೇ? ಗೊತ್ತಿಲ್ಲ.

ನಾನು ಕಾಯುತ್ತಿರುವೆ. ನೀನು ಒಂದಿಲ್ಲೊಂದು ದಿನ ಬರುವೆ. ಕಗ್ಗತ್ತಲೆಯ ಕಾಡಿನಲ್ಲಿ ದಾರಿತಪ್ಪಿ ತಿರುಗುತ್ತಿರುವವನಿಗೆ ದೂರದಲ್ಲಿ ಕಂಡ ಮಿಣುಕು ದೀಪದಂತೆ, ಆ ದೀಪವು ಹತ್ತಿರ ಸಾಗಿ ಬಂದು ದಾರಿ ತೋರಿದಂತೆ, ನೀರಿನ ಸುಳಿಯಲ್ಲಿ ಬಿದ್ದು ಈಜು ಬಾರದವನಿಗೆ ತೇಲಿಬಂದ ಮರದ ಸಣ್ಣ ದಿಮ್ಮಿಯಂತೆ, ಹಾಡಿನ ರಾಗ ಮರೆತು ಚಡಪಡಿಸುವವನಿಗೆ ಬದಿಯ ವಾದ್ಯವೊಂದು ಶೃತಿ ಸೇರಿಸಿದಂತೆ, ಹಸಿವೆಯಿಂದ ಕಂಗೆಟ್ಟ ಬಡ ಪರದೇಸಿಗೆ ದೇವರ ಪ್ರಸಾದ ಸಿಕ್ಕಿದಂತೆ - ನನ್ನ ಅಂತಿಮ ನಿರೀಕ್ಷೆಯ ಕ್ಷಣದಲ್ಲಾದರೂ ನೀ ಬರುವೆ, ನನ್ನ ಮುಂದೆ ಕೈ ಚಾಚುವೆ, ನನ್ನ ಎದೆಗೆ ಒರಗಿ ಹೃದಯ ಬಡಿತ ಕೇಳುವೆ, ನನ್ನ ಕಣ್ಣಿನಲ್ಲೊಂದು ಮಿಂಚು ಹಾದುಹೋಗುವುದನ್ನು ಕಾಣುವ ಆಸೆಯನ್ನು ನೀನು ಪಡೆಯುವೆ ಎಂಬ ಕಲ್ಪನೆಯೇ ಹೆಚ್ಚು ಹೆಚ್ಚು ಬರುತ್ತಿದೆ. ಅದೇ ಕಾಯಿಸುತ್ತದೆ. ನೆನಪುಗಳನ್ನು ಕೆದಕಿ ಮಸುಕಾಗದಂತೆ ಕಾಯುತ್ತಿದೆ. ಅದೇ ಕಾರಣ ಆ ಕಣ್ಣಾಮುಚ್ಚಾಲೆ ಆಟಕ್ಕೆ. ಆದಕ್ಕಾಗಿಯೇ ಮನ ಹಗಲಿರುಳು ಸಹ ಪುನರಾವತರ್ಿಸುತ್ತಿರುವುದು, ನಿನದೇ ನೆನಪು ದಿನವೂ ಮನದಲ್ಲಿ ಎಂದು.


Saturday, 14 March 2015

ಗಂಡು ಹೆತ್ತವರ ನೋವಿನ ಕಥೆ (ಹವಿಗನ್ನಡದ ಒಂದು ಸಣ್ಣ ಝಲಕ್...)



ಎಂತಾ ಕಾಲ ಬಂದ್ಹೋತು| ಅರೆ
ಎಂತಾ ಕಾಲ ಬಂದ್ಹೋತು||
ಮನೆಲಿಪ್ಪ ಮಾಣಿಗೆ ಹೆಣ್ಣೇ ಸಿಗದ
ಎಡವಟ್ಟು ಕಾಲ ಬಂದ್ಹೋತು||

ಹೆಣ್ಣ್ ಹುಡ್ರೆಲ್ಲಾ ಎಲ್ಲೋದ|
ಕರ್ಮ| ಎಲ್ಲಾ ಬೆಂಗಳೂರ್ ಪಾಲಾದ|
ಜಾತಕಾ ಒಂದೂ ಬತ್ತಿಲ್ಲೆ|
ಒಟ್ಟು| ಎಮ್ಮನೆ ಮಾಣಿಗೆ ಮದುವಿಲ್ಲೆ||
ಎಂತಾ ಕಾಲ ಬಂದ್ಹೋತು| ಅರೆ|
ಎಂತಾ ಕಾಲ ಬಂದ್ಹೋತು||

ಎಲ್ಲಾ ಏಜೆಂಟರ್ ಮಾತಾಡ್ಸದಿ|
ಆನ್| ದುಡ್ಡ್ ಕೊಟ್ಟ್ ಕೊಟ್ಟು ಸೋತೋದಿ|
ಅಲ್ಲ್ ಬಾ ಇಲ್ಲ್ ಬಾ ಅಂದಂಗೂ ಎಲ್ಲಾ ಬದಿಗೂ ಆನ್ ಹೋದಿ|
ಸುಮ್ನೆ ತಿರಕ್ಯಂಡ್ ಮನೆಗ್ ಬಂದಿ||
ಎಂತಾ ಕಾಲ ಬಂದ್ಹೋತು| ಅರೆ|
ಎಂತಾ ಕಾಲ ಬಂದ್ಹೋತು||

ಎಮ್ಮನೆದೊಂದು ಕೊಟಗುಡ್ತು|
ಥೊ| ಈ ಮಾಣಿ ಮಂಡೆ ಬೆಳ್ಗಾತು|
ಇಂವ ಮಾಡಿದ್ದ ಉನ್ನತ ವ್ಯಾಸಂಗ|
ಈ ಬದುಕಲ್ಲಿ ಕಟ್ಟಿತ್ನಿಲ್ಲೆ ಬಾಸಿಂಗ||
ಎಂತಾ ಕಾಲ ಬಂದ್ಹೋತು| ಅರೆ|
ಎಂತಾ ಕಾಲ ಬಂದ್ಹೋತು||

ರಾಮ್ ಭಟ್ರ ಮಾಣಿಗೂ ಮದುವ್ಯಾತು|
ಆಚೆ ಮನೆ ಗಪ್ಪತಿದ್ ನಿಕ್ಕಿಯಾತು|
ಯಮ್ಮನೆದೊಂದೆ ಕುಂತ್ಹೋತು|
ಥೊ| ಎಂತಾ ಕಾಲ ಬಂದ್ಹೋತು||
ಎಂತಾ ಕಾಲ ಬಂದ್ಹೋತು| ಅರೆ|
ಎಂತಾ ಕಾಲ ಬಂದ್ಹೋತು||

ಯಮ್ಮನೆಲೆಲ್ಲಾ ಚೊಲೊ ಇದ್ದು|
ಮೂರ್ ನಾಕ್ ಎಕರೆ ತೋಟ್ ಇದ್ದು|
ಓಡಾಡಲ್ಲೆ ಕಾರ್ ಇದ್ದು|
ಆದ್ರೆ ಕೂಸು ಎಲ್ಲಿದ್ದು?||
ಎಂತಾ ಕಾಲ ಬಂದ್ಹೋತು| ಅರೆ|
ಎಂತಾ ಕಾಲ ಬಂದ್ಹೋತು||

ಈ ಜಾತಕಾ ಜಾತಿ ನೋಡತ್ನಿಲ್ಲೆ|
ಕೂಸ್ ಹೆಂಗಿದ್ರೂ ತೊಂದ್ರಿಲ್ಲೆ|
ಆನ್ ನೋಡದ್ಹೋದಾ ಜಾಗಿಲ್ಲೆ|
ಇನ್ ಎನ್ನ ಕೈಲಿ ಹುಡಕಲೆ ಆಗ್ತಿಲ್ಲೆ|
ಎಂತಾ ಕಾಲ ಬಂದ್ಹೋತು| ಅರೆ|
ಎಂತಾ ಕಾಲ ಬಂದ್ಹೋತು||
ಮನೆಲಿಪ್ಪ ಮಾಣಿಗೆ ಹೆಣ್ಣೇ ಸಿಗದಾ|
ಬರಗೆಟ್ಟ ಕಾಲ ಬಂದ್ಹೋತು|||


(ಬರೆದವರು ಯಾರು ಅಂತಾ ಗೊತ್ತಿಲ್ಲ. ವರ್ತಮಾನದ ನೈಜತೆಯನ್ನು ಬಿಂಬಿಸಿದ ಪದ್ಯ. ಕವಿ/ಕವಯಿತ್ರಿಯ ಕ್ಷಮಾಪಣೆ ಕೋರಿ ಅವರ ಅಪ್ಪಣೆಯಿದೆಯೆಂದು ಭಾವಿಸಿ ಇಲ್ಲಿ ಲಗತ್ತಿಸಿರುವೆ, ಕವಿ/ಕವಯಿತ್ರಿ ಯಾರೆಂದು ತಿಳಿದುಕೊಳ್ಳುವ ಹಂಬಲ ನನಗಿದೆ. ತಿಳಿದವರು ತಿಳಿಸಿ.)

Monday, 2 February 2015

ಪರಮ-ಪ್ರೇಮ-ಪ್ರಸಂಗ

(ಚಿತ್ರಗೀತೆಗಳಲ್ಲಿ ನನ್ನ ಸ್ವಂತ ಪದಪ್ರಯೋಗ ಮಾಡಿ ಬರೆದ ಲೇಖನ. ಲೇಖನದಲ್ಲಿ ಸಣ್ಣಕತೆಯನ್ನು ಹೊಂದಿಸಿ, ಹಾಸ್ಯವನ್ನು ಹೂರಣ ಮಾಡುವ ಯತ್ನ. ಓದಿ ತಿದ್ದಿ ತಿಳಿಸಿ)

ಅವನು ಪರಮ. ಪರಮೇಶ್ ಅವನ ಹೆಸರಷ್ಟೇ. ಎಲ್ಲಾ ಕಡೆ ಪರಮನೆಂದೆ ಪ್ರಸಿದ್ಧ. ಅದಾಗಲೇ ಎರಡು ವರ್ಷ ಕಾಲೇಜು ಮೆಟ್ಟಿಲು ಸವೆಸಿ, ತನ್ನ ತಲೆಯನ್ನು ಪರೀಕ್ಷೆಯಲ್ಲಿ ಸವೆಸಿಕೊಂಡಿದ್ದ. ಹಾಗೂ ಹೀಗೂ ಪದವಿ ಪ್ರವೇಶ ಪಡೆದು, ಪದವೀಧರನಾಗುವ ಕನಸು ಹೊತ್ತಿದ್ದ ಅವನಲ್ಲಿ ಯಾವ ಧರನಾಗುವ ಲಕ್ಷಣವೂ ಕಾಣುತ್ತಿರಲಿಲ್ಲ. ಅವನ ಸ್ನೇಹಿತರೂ ಯಾರ ವ್ಯಕ್ತಿತ್ವಕ್ಕೂ ಹಿತವರಾಗಿರಲಿಲ್ಲ. ಬೆಳಿಗ್ಗೆ ಕಾಲೇಜು ಮೆಟ್ಟಿಲಲ್ಲಿ ಕುಳಿತು ಬಂದು ಹೋಗುವವರಿಗೆಲ್ಲಾ ತಮ್ಮ ಪದಪ್ರಯೋಗ ಮಾಡುವುದೇ ಆ ತಂಡದ ದಿನಚರಿ. (ಪದಪ್ರಯೋಗ ಹುಡುಗಿಯರಿಗೆ ಅಂತ ಮತ್ತೆ ಹೇಳಬೇಕಾಗಿಲ್ಲವಷ್ಟೆ). ಮುಖ-ಮುಸುಡಿ ಹಿಂದೆ ಮುಂದೆ ನೋಡದೇ ಕಾಡುವುದೇ ಕೆಲಸ ಇವರಿಗೆ, ಹೊತ್ತು ಕಳೆಯಬೇಕಲ್ಲಾ. ಸ್ವಲ್ಪ ಕಲ್ಪಿಸಿಕೊಳ್ಳಿ.

ಯಾರಿವಳು ಯಾರಿವಳು
ರಾಮಭಟ್ಟರ ಮೊಮ್ಮಗಳು
ಶ್ಯಾಮಭಟ್ಟರ ತೋಟದಲ್ಲಿ ಕೊಳೆಅಡಿಕೆ ಹೆಕ್ಕುವಳು
ಮಾತಿನಲಿ ಕೇಳಿದರೆ ಕೈಗೆ ಸಿಗಳು, ಹಾಡುತಾ ನೋಡು ಬರುವಳು ಇವಳು.
ದಯಮಾಡಿ ಬಸ್ ಸ್ಟಾಂಡಲಿ ಸ್ವಲ್ಪ ನೋಡಿ ಎಲ್ಲರೂ
ಸಾಲಾಗಿ ಕಾಲೇಜಿನ ಹುಡುಗರೆಲ್ಲ ನಿಂತರು,
ಸುಂದರಿ ಅಸುರಸುಂದರಿ,
ಈ ಸುಂದರಿಯ ಡ್ರೆಸ್ಸು ನೋಡಲು
ಇವಳ ನೋಡಿ ಹಲ್ಲು ಕಿಸಿಯಲು.
ಎರಡು ದೊಡ್ಡ ಕಣ್ಣಿದೆ, ಅಲ್ಲೆ ಸೊಟ್ಟ ಮೂಗಿದೆ
ಬಬ್ಬಲ್ ಗಮ್ ಒಳಗಿದೆ, ಒಂದು ಹಲ್ಲು ಹೊರಗಿದೆ,
ಏನಿದು ಏನು ಮೋಜಿದು, ಏನಿದೇನು ಮಜವಿದು.
ಯಾರಿವಳು......

ಹೀಗೆ ಪೋಲಿ ಪೋಕರಿಯಾಗಿ ಅಲೆಯುವ ಪರಮನಿಗೆ ಜೀವನದ ನಿಜ ಸಜದ ಬಗ್ಗೆ ಸಹಜವಾಗಿಯೇ ಗೊತ್ತಿಲ್ಲ. ಮತ್ತೊಂದು ವರ್ಷವೂ ಇಂಥ ಆಕರ್ಷಣೆಯಲ್ಲಿ ಮುಗಿದುಹೋಯಿತು. ಆಗ ಕಾಲೇಜಿಗೆ ಬಂದವಳೇ ಚೆಲುವೆ. ಮನಸೋತ ಪರಮ, ಈಗ ಪರಮ-ಪ್ರೇಮಿಯಾದ. ಪ್ರೇಮ ನಿವೇದನೆಯೂ ಆಯಿತು, ಪರಿಣಾಮ ಇವನ ವೇದನೆಯೂ ಹೆಚ್ಚಾಯಿತು. ಏನಾದರಾಗಲಿ ಎಂದು ಆ ಚೆಲುವೆಯ ಅಪ್ಪನೆದುರೇ ವೇದನೆಯ ನಿವೇದನೆಗೆ ಮುಂದಾದ.

ಬೇಡುವೆನು ವಧುವನ್ನು, ಕೊಡು ಮಾವ ಮಗಳನ್ನು,
ಕಡೆತನಕ ಇರ್ತೀವಿ ಜೋಡಿ, ಇಲ್ದಿದ್ರೆ............
ಇಲ್ದಿದ್ರೆ ಹೋಗ್ತೀವಿ ಓಡಿ....

ಹೀಗೆ ಕೇಳಿದರೆ ಯಾರಾದರೂ ಕನ್ಯಾದಾನ ಮಾಡ್ತಾರಾ?  ಈ ವಿಧಾನ ಪರಮನ ಪಾಲಿಗೆ ಯಾವ ಉಪಯೋಗವನ್ನೂ ಮಾಡಲಿಲ್ಲ. ಅವಳಿಗೆ ಮನಸೋತಿದ್ದ ಪರಮ ಕಾಲು ಸುಟ್ಟ ಬೆಕ್ಕಿನಂತೆ ಹುಚ್ಚುಚ್ಚಾಗಿ ತಿರುಗತೊಡಗಿದ. ಇದ್ದ - ಬದ್ದ ಚಟಗಳಿಗೆಲ್ಲಾ ತನ್ನ ತನುವಿನ ಮನೆಯಲ್ಲೇ ಜಾಗ ಕೊಟ್ಟ. ಕುಡಿತ, ಧೂಮಪಾನಗಳೇ ನಿಧಾನವಾಗಿ ದಿನದ ಪ್ರಧಾನವಾಗಿ ಹೋಯಿತು. ಸಾರಾಯಿಯೊಂದಿಗೇ ನಿದ್ದೆ, ಸಿಗರೇಟಿನೊಂದಿಗೇ ಮಾತುಕತೆ.

ನೀನೇ ನೀನೇ ನನಗೆಲ್ಲಾ ನೀನೇ,
ಕೈಯಲ್ಲೂ ನೀನೇ, ಬಾಯಲ್ಲೂ ನೀನೇ
ನನ್ನ ಎದೆಯ ತುಂಬಾ ನಿನ್ನ ಹೊಗೆಯು ತಾನೇ,
ನೀನೆ ಇರದ ಮೇಲೆ ಈ ಜೀವ ಬರಿಬೂದಿ ತಾನೇ,
ಮಳೆಯಾಗಲಿ ಬಿಸಿಲಾಗಲಿ ಚಳಿಯಾಗಲಿ ನಿನ್ನ ಸೇದುವೆ
ಬೆಳಗಾಗಲಿ ಇರುಳಾಗಲಿ ಮರುಳಾಗಿ ನಿನ್ನ ಕೈ ಹಿಡಿಯುವೆ
ನೀನೇ ನನ್ನ ಪ್ರಾಣ ಎಂದು ಜಗವೇ ನೋಡಬೇಕು
ನನ್ನ ನಿನ್ನ ಪ್ರೀತಿ ನೋಡಿ ಎಲ್ರೂ ಹೆದರಬೇಕು..
ನೀನೇ ನೀನೇ ನೀನೇ ನೀನೇ....

ಇವನ ಮನಮನೆಯೆಲ್ಲಾ ಹೊಗೆಯಿಂದ ತುಂಬಿಹೋಯಿತು. ಮನೆ ಮುಂದೆ ಹೊಗೆ ಹಾಕುವುದೊಂದೇ ಬಾಕಿ. ಪರಮನ ಪಿತಪಿತಾಮಹರು, ಪರಸ್ತ್ರೀಯಿಂದ ಇವನಿಗಾದ ಪರಿಸ್ಥಿತಿಯನ್ನು ಕಂಡು ಮರುಗಿದರು. ಪರಮನಿಗೆ ಮದುವೆ ಭಾಗ್ಯ ಬಂದರೆ ಬಾಳಿನಲ್ಲಿ ಸರಿಹೋಗಬಹುದು ಎಂದು ವಿಚಾರ ಮಾಡಿ ಜೀವನದಲ್ಲಿ ಒಂಟಿಯಾಗಿರುವ ಪರಮನನ್ನು ಜಂಟಿಯಾಗಿಸುವ ಕಾರ್ಯಕ್ಕೆ ಮುಂದಾದರು. ಈ ಚಟಚಕ್ರವರ್ತಿಗೆ ಯಾರು ಹೆಣ್ಣು ಕೊಡುತಾರೆ? ಅಂತೂ ಇಂತೂ ಘನಘೋರ ಪ್ರಯತ್ನವನ್ನೇ ಮಾಡಿದ ಪಿತಪಿತಾಮಹರು ಕೃಷ್ಣವೇಣಿಯಾದ ಶೋಧಿಸಿದ ಕೃಷ್ಣೆಯಂತಿರುವ ವಧುವೊಬ್ಬಳನ್ನು ಶೋಧಿಸಿ ವಿವಾಹವನ್ನು ಪೂರೈಸಿದರು. ವಿವಾಹಿತ ಪರಮನ ಅರ್ಧಾಂಗಿಯೇ ಸೇವಂತಿ. ಗಂಡಹೆಂಡಿರ ಜೀವನ ಉಂಡು ಮಲಗುವ ತನಕ.

ಸೇವಂತಿಯೇ ಸೇವಂತಿಯೇ
ಬೆಳಕಿಲ್ಲದಿದ್ರೆ ನೀ ಕಾಣೆಯೇ
ಮಸಿಕೆಂಡಕಿಂಥ ಬಲು ಕಪ್ಪು ನೀನು
ಕರಿಕಾಗೆಗಂತೂ ಸರಿಸಾಟಿ ನೀನು
ಯಾವ ಜನ್ಮದ ಪಾಪವೋ ನನಗೇ ನೀನು ಸಿಕ್ಕಿರುವೆ,
ಸೇವಂತಿಯೇ......

ಹುಟ್ಟು ಶ್ರೀಮಂತ ಪರಮ. ಹೆಂಡತಿಯೋ ವಿಷಯ ಪ್ರಿಯೆ, ಅರ್ಥಪ್ರಿಯೆ. ಹೊಸದೇನೇ ಪೇಟೆಗೆ ಬಂದರೂ ಅದು ತನ್ನ ಮನೆಯನ್ನು ಶೋಭಿಸುವ ಪೇಟವಾಗಬೇಕೆಂಬ ಹಠ ಅವಳದು. ಹೊಸ ಫ್ಯಾಶನ್ ಬಂದರೂ, ಹೋದರು ಅದನ್ನು ಇವಳ ನೋಡಿಯೇ ತಿಳಿಯಬೇಕು. ಸೇವಂತಿ ಮನೆಯಿಂದ ಹೊರಗಿರುವುದೇ ಹೆಚ್ಚಾಯಿತು. ಮನೆ ಮಾರಿ ಮನೆಯಿಂದ ಮಾರು ದೂರ ಹೋಗುವ ಸಮಯ ಬಹಳ ದೂರ ಇರಲಿಲ್ಲ. ಆಗರ್ಭ ಶ್ರೀಮಂತ ಪರಮನಿಗೆ ಅಡುಗೆಮನೆಯೆಂಬ ಮನೆಯ ಗರ್ಭಗುಡಿಯೇ ಮನೆಯಾಯಿತು. ಸಿರಿತನ ಕರಗುತ್ತಿತ್ತು. ಊಟ ಉಪಹಾರ ಮಾಡಿ ಬಡಿಸಲೂ ಜನವಿಲ್ಲ, ಉಪಚಾರಕ್ಕೂ ಯಾರೂ ಗತಿಯಿಲ್ಲ. ಸ್ವಪಾಕ, ಸ್ವಸಹಾಯವೇ ಗತಿಯಾಯ್ತು ಪರಮನಿಗೆ.

ಆಕಾಶವೇ ಬೀಳಲಿ ಮೇಲೆ, ಈ ಸೌಟು ಕೈಬಿಡದು,
ಭೂಮಿಯೆ ಬಾಯ್ಬಿಡಲಿ ಇಲ್ಲೇ, ಅಡುಗೆಮನೆಯು ನನಬಿಡದು,
ನಾನಿರುವುದು ನಳನಾಗಿ, ಅಡುಗೆಮನೆ ನನಗಾಗಿ..
ಬಗೆಬಗೆಯ ಸಿಹಿಕಹಿ ಅಡುಗೆ ನಾನೇ ಮಾಡಿ ಬಡಿಸುವೆ,
ನೀ ಮನೆಗೆ ಬರುವೆ ಎಂದು ಬಾಗಿಲಲ್ಲೆ ಕಾದಿರುವೆ,
ಈ ಮಾತಿಗೆ ಬಾಗಿಲೇ ಸಾಕ್ಷಿ, ನನ್ನ ಪ್ರೀತಿಗೆ ಪಾಯಸ ಸಾಕ್ಷಿ,
ಇನ್ನಾದರು ಮನೆಗೆ ಬಂದು ಅಡುಗೆ ಮಾಡು ಒಲವೇ....

ಪರಮನ ಸಂಸಾರವೂ ಹೋಳಾಯಿತು. ಪರಮನ ದೇಹವೂ ಸಾರಿನಿಂದ ಹೊರತೆಗೆದ ಹಳಸಿದ ಹೋಳಾಯಿತು. ಸೇವಂತಿ ಪರಮನ ಬಾಳಿನಿಂದ ದೂರವಾದಳು. ಬಾಳಿನಲ್ಲಿ ಬಸವಳಿದ ಪರಮನಿಗೆ ಲೋಕವೇ ಬೇಡವಾಗಿ ಹೋಯಿತು. ಬೀದಿ ಬಸವನಂತೆ ಯೌವ್ವನದಲ್ಲಿ ಮೆರೆದ ಪರಮ ವಯಸ್ಸಾದಂತೆ ಬೀದಿ ಪಾಲಾದ, ಬೀದಿ ಎತ್ತಿನಂತಾದ. ಕುಡಿತಕ್ಕೆ ದಾಸನಾದ. ದೇವದಾಸನ ಸ್ವರೂಪನಾದ ಪರಮ ತನ್ನ ಕತೆಯನ್ನು ಎಲ್ಲರಿಗೂ ಪವಿತ್ರ ಪ್ರೇಮಗೀತೆಯ ರೂಪದಲ್ಲಿ ತನ್ನ ಚರಮಗೀತೆ ಕೇಳುವವರೆಗೂ ಹಾಡಿದ. ಬಾರಿನಲ್ಲಿ ಕೂತು ಉಚಿತ ಸಲಹೆಯೋ, ಉಚಿತ ಮನೋರಂಜನೆಯೋ ಎಂಬಂತೆ ಎಲ್ಲರೆದುರು ಹಾಡಿದ, ಅದು ಕುಡಿತದ ಅಮಲೋ ಅಥವಾ ಜೀವನ ಕಲಿಸಿದ ಪಾಠವೋ ಎಂಬುದು ಮಾತ್ರ ಯಾರಿಗೂ ಅರ್ಥವಾಗಲಿಲ್ಲ.

ಬಾರಿರಿರುವುದೆ ನಮಗಾಗಿ
ಬೀಯರಿರುವುದೆ ನಿಮಗಾಗಿ,
ವಿಸ್ಕಿ ಬೇಕೇ, ರಮ್ಮೇ ಸಾಕೇ,
ಕುಡಿದು ಎಲ್ಲರೂ ಟೈಟಾಗಿ,, ಎಲ್ರೂ ಕುಡಿದು ತೂರಾಡಿ..
ಬಾರಿರುವುದೇ......

ಅದು ಅವನಿಗಾಗಿಯೇ ಕಟ್ಟಿದ ಬಾರ್ ಆಗಿತ್ತೇನೋ. ಅವನ ಸಾವನ್ನು ನೋಡಲೆಂದೇ ಕಟ್ಟಿದ ಬಾರ್ ಆಗಿತ್ತೋ ಏನೋ. ಬಾರ್ ಯಜಮಾನ ನಗರಸಭೆಗೆ ದೂರವಾಣಿ ಕರೆ ಮಾಡಿ ಅನಾಥ ಶವವನ್ನು ಸಾಗಿಸಲು ಅನುವಾದ.

ಇತಿ ಪರಮಂ ಪ್ರೇಮಂ ಪ್ರಸಂಗಂ ಸಂಪೂರ್ಣಂ.






Friday, 16 January 2015

ಆ ಸಾವಿರ ಕ್ಷಣಗಳು,
ಸಾವಿರದ ಕ್ಷಣಗಳು,
ಆ ಜೀವದ ನೆನಪುಗಳು,
ಜೀವಿಸಿದ ನೆನಪುಗಳು.