Search This Blog

Wednesday, 4 September 2019

ನೆರೆಯ ನಂತರ?!!

ನಾಗರನಂತೆ ಬಳುಕುತ್ತ
ಸುಳಿ ಹೊಕ್ಕುಳ ತೋರುತ್ತ
ಸಾಗರನತ್ತ ಮೆತ್ತಗೆ
ಓಡುತ್ತಿದ್ದಳು ಗಂಗಾವಳಿ

ನಾಗರ ಪಂಚಮಿಯಂದು
ಕೆಂಪಾದಳು, ಉಕ್ಕಿದಳು
ಹಸಿದ ನಾಗರನಂತೆ ಸೊಕ್ಕಿ
ಹಸಿರ ನುಂಗಿ ಅಗಲವಾದಳು

ಪರ್ವತನ ವರಿಸಿ ಆವರಿಸಿದಳು
ಜಲದ ಹಾರ ಹಾಕಿ ನೇವರಿಸಿದಳು
ರೌದ್ರ ಪ್ರೇಮ ನಿವೇದನೆಯಲ್ಲಿ
ತನ್ನೊಡಲ ಮಕ್ಕಳ ಮರೆತಳು!

ಜನ ದನ ಮನೆ ವನವೆನ್ನದೇ
ಸಕಲವೂ ಜಲದಿಗ್ಬಂಧನದಲ್ಲಿ
ಹಳೆಯ ಜುಳು ಜುಳು ನಾದವಿಲ್ಲ
ಸೊಕ್ಕಿದ ಹೊಳೆಯ ಮೊರೆತ

ಹರಿವಿಗೆ ಅಡ್ಡಬಂದ ಮರವೋ
ಮನೆಯೋ ಸೇತುವೆಯೋ
ಮುರಿದು ಮುಕ್ಕಿದಳು ತನ್ನ
ಕೈಗೆಟುಕಿದ ಎಲ್ಲವನ್ನೂ

ಮೂರು ಹಗಲು ಎರಡು ರಾತ್ರಿ
ಮನದಣಿಯೆ ಹರಿದಳು
ಮೈಭಾರವ ಇಳಿಸಿದಳೋ
ಹಳೆಯ ಗುರುತುಗಳ ಅಳಿಸಿ

ಹಲವರ ಮನೆ ಮುರಿಯಿತು
ಹಲವರ ಮನ ಕುಸಿಯಿತು
ಹಸಿಯಾಯ್ತು ಮನಮನೆಯೆಲ್ಲಾ
ಹುಸಿಯಾಯ್ತು ಕಡೆದ ಕನಸು

ಅಡಿಕೆ ಮರಗಳು ನೇರ
ಬೆಳೆಯಲು ಹೆದರುತ್ತಿವೆ
ಬಾಗಿದ ಅಡಿಕೆ ಮರಗಳ
ದುಸ್ಥಿತಿಯ ನೋಡಿ

ಹಸಿರುಟ್ಟಿದ್ದ ಭುವಿಯಿಂದು
ಕಡುಗೆಂಪು ಧರೆಯಾಗಿದೆ
ಅಲ್ಲಲ್ಲಿ ಮರಳ ದಿಬ್ಬ
ಹಸನಾದ ನೆಲ ಕೆಸರಾಗಿದೆ

ನಾಗರಗಳು ಮನೆ ಹುಡುಕಿ
ಬಂದಿವೆ ಹಸಿ ಮಣ್ಣ ತಂಪಿಗಾಗಿ
ಅವರ ಮನೆಯೂ ಕದಡಿ
ಮುರಿದು ಹೋಗಿದೆಯೋ ಏನೋ!

ಹಳೆಯ ಬದುಕೇ ಮರಳಿ ಬಾ
ಮನಸು ಮರುಗುವುದು
ಮರಳು ತುಂಬಿದ ತೋಟ ಕಂಡು
ಸುಮ್ಮನೆ ಮಂಜಾಗುವುದು ಕಣ್ಣು

ನಿಸರ್ಗ ಸ್ವರ್ಗವೆಂಬರು,
ಮಳೆ ನಿಸರ್ಗದ ಕೊಡುಗೆಯಂತೆ!
ಆದರೂ ಮಳೆ ಸುರಿಸುರಿದು
ಜನರ ಕೆನ್ನೆ ತೋಯಿಸಿದ್ದೇಕೆ?

Thursday, 13 June 2019

ಹತ್ತಂಕಣದ ಮನೆ

ಹತ್ತಂಕಣದ ಮನೆ ಜನರಿಲ್ಲ ದನವಿಲ್ಲ
ಹಳತು ಬದುಕಿನ ಕತೆಯ ಸಾರಿ ಹೇಳುತಿದೆ

ಹಳೆಯ ಬಾಸಿಂಗ ತೊಟ್ಟು ಬೀಗಿದ್ದ ಕೋಳ್ಕಂಬ
ಒಡೆದ ಹೆಂಚಿನ ನಡುವೆ ತಲೆಚಾಚಿ ಬಾಗಿದೆ

ಧೂಪದೀಪಗಳಿಲ್ಲ ಒಳಗೆ ಸುಪ್ತ ಸಪ್ಪಳ
ಮುರಿದ ಬಾಗಿಲು ಬಲೆಯ ಆಸರೆಯ ಕೇಳಿದೆ

ಮಳೆಗೆ ಸೋರುತಿದೆ ಬಿಸಿಲು ಒಳ ಇಣುಕುತಿದೆ ಗುಪ್ತವಾಗಿದ್ದ ಕತ್ತಲೆ ಕೋಣೆ ಬೆತ್ತಲಾಗಿದೆ

ಹೆಬ್ಬಾಗಿಲಿನ ಕುಸುರಿ ಕೆತ್ತನೆ ಮಾಸಿ ಕಪ್ಪಾಗುತಿದೆ
ಬಣ್ಣ ಬಳಿದ ಬಾಗಿಲ ಮೆಟ್ಟು ಮಸುಕಾಗುತಿದೆ

ಕವಳದ ತಾಟು ಇಸ್ಪೀಟು ಗಿಳಿಗುಟ್ಟ ಇಂದಿಲ್ಲ ಹೊರಜಗುಲಿಯು ಪಟವಿಲ್ಲದೆ ಭಣಗುಡುತಿದೆ

ಖುಷಿಯಲ್ಲಿ ಜೊತೆಯಾಗಿ ದುಃಖದಲಿ ಹೆಗಲಾಗಿ
ಬಾಳಿ ಬದುಕಿದ ಮನೆಯ ಮರೆತು ಹೊರಟರೇ?

ಕಾಂಚಾಣ ಕರೆಯುತಿದೆ ಹಳ್ಳಿ ಹೊರಗೋಡುತಿದೆ ನೆಮ್ಮದಿಯ ಬಿಟ್ಟು ಜನ ಹೊರಟಿಹರು ಶಹರದೆಡೆಗೆ

ದಾಸಾಳ ಕರವೀರ ನಂಜಾಟ ಮಲ್ಲಿಗೆಯು
ಸುಮಪಾರಿಜಾತ ಮನೆಯ ಮುಂದಿಲ್ಲ ಇಂದು

ಅಂಗಳದ ತುದಿಯಲ್ಲಿ ಒಣಗಿಹುದು ಸೋಣೆಗಿಡ
ಕಳೆ ಬೆಳೆದು ಸುತ್ತರಿದು ಬಾಯ್ತೆರೆದು ನಿಂತಿದೆ

ದಶಕಗಳು ಅತ್ತಿತ್ತ ಸರಿಯುತ್ತ ನುಣುಪಾದ
ಸರಗೋಲಿಗೆ ಹಬ್ಬಿರುವ ಬಳ್ಳಿಗೆ ವರುಷವಾಗಿದೆ

ಹಸಿರು ಹುಲ್ಲಿನ ನಡುವೆ ಸಣ್ಣ ಕೆಂಪನೆ ದಾರಿ ಉಳಿದಿಹುದೊಂದು ಹಳೆಮನೆಯ ನೆನಪಿಗಾಗಿ

Tuesday, 11 June 2019

*ಗೂಡಂಗಡಿಯಲ್ಲಿ ಕಂಡಂತೆ*

ನನಗಿರುವನೊಬ್ಬ ಗೂಡಂಗಡಿಯ ಗೆಳೆಯ
ವ್ಯಾಪಾರ ಸುರುಮಾಡಿ ಅವ ಬಹಳ ಸಮಯ
ಮಾರಿದನು ದಿನವೂ ಗುಟ್ಕ ಬೀಡಿ ಸಿಗರೇಟು
ತಂಬಾಕು ನಶೆಯನ್ನು ಕೊಡುತಿರುವ ಸಪರೇಟು

ಸಿಗರೇಟು ಬೀಡಿಗಳು ಅವಗೆ ಲಾಭದ ಬುತ್ತಿ
ಸರಿದಿಹನು ಬಗೆಬಗೆಯ ಸೈಜುಗಳ ಬತ್ತಿ
ಹೊಗೆಯನ್ನು ಉಗುಳುವುದು ಅದು ಬೆಂಕಿ ಹತ್ತಿ
ಹೊಗೆ ಸೇದುವವರೇ ನಮ್ಮ ಗೆಳೆಯನ ಆಸ್ತಿ

ಸಣ್ಣ ದೊಡ್ಡ ಉದ್ದ ಗಿಡ್ಡ ತರತರದು ಉಂಟು
ಒಮ್ಮೆ ರುಚಿ ಕಂಡವರು ಬಿಡರಿದರ ನಂಟು
ಹೊಗೆಯ ಉಂಗುರವಾಗಿ ಹೊರಬಿಡುವರುಂಟು
ಹೊಗೆಯುಗುಳಿದ ಮೇಲೆ ಅಗೆಯುವರು ಮಿಂಟು

ಬಿಳಿಯ ಕಾಗದ ಒಳಗೆ ಕರಿಯ ತಂಬಾಕು
ಹಾಕಿ ಸುತ್ತುವರು ಮತ್ತೆ ಮಾಡುವರು ಪ್ಯಾಕು
ಚಟ ಹತ್ತಿದವರಿಗೆ ಬೇಕು ದಿನಕೊಂದು ಪ್ಯಾಕು
ಆಟಕ್ಕೆ ಸೇದುವರು ಅವರಿಗೊಂದು ಸಾಕು

ಬಡವರು ಹೊಗೆ ಬಿಡಲು ಬಳಸುವರು ಬೀಡಿ
ಸಿಗರೇಟು ದುಡ್ಡಿರುವ ದೊಡ್ಡವರಿಗೆ ನೋಡಿ
ಯಾವುದಾದರೂ ಹೊಗೆ ಉಗುಳುವುದು ಪಕ್ಕಾ
ದಿನಕೆಷ್ಟು ಜನ ಸೇದುವರೋ ಇಟ್ಟಿಲ್ಲ ಲೆಕ್ಕ

ಹಣ ನೀಡಿ ಹೊಗೆ ಸೇದಿ ಮಜದಲ್ಲಿ ಜನರು
ಮರೆಯುವರು ಜಗವನ್ನು ಕಳಕೊಂಡು ಖಬರು
ಉಸಿರಿನಲಿ ಹೊಗೆ ಸೇರಿ ಅರ್ಬುದವ ಕರೆಸಿ
ಹೊಗೆ ಹಾಕಿಕೊಂಡಿಹರು ಉಸಿರನ್ನು ನಿಲಿಸಿ

ಮಳೆಯಲ್ಲಿ ಚಳಿಯಲ್ಲಿ ಕೊಂಡು ಸಿಗರೇಟು
ಕಳೆದವರು ಕಳೆದಿಹರು ಬಹಳಷ್ಟು ನೋಟು
ಉಳಿದವರು ಮಾಡಿದರು ಅಂಗಡಿಯ ಬಂದು
ಉಳಿದವರು ಉಳಿದಿಲ್ಲ ಅಳಿದಿಹರು ಇಂದು!!

ಖುಷಿ

ಮುದ್ದುಮೊಗದ ಮಾಣಿ ತಾಯಿ ಮಡಿಲಲಿರುವನು
ಮುದ್ದುತನದ ಆಟವಾಡಿ ಮಡಿಲಲೀತ ನಲಿವನು

ಅತ್ತ ಇತ್ತ ಸುತ್ತ ಮುತ್ತ ನೋಡೆ ಬೆಳಕು ಕಾಣಲು
ಇಷ್ಟು ದಿವಸ ಕತ್ತಲಿತ್ತು ಎಂದು ಬೆರಗುಗೊಳುವನು

ತಮದ ಕೋಟೆಯೊಳಗೆ ಇದ್ದೆ ಬೆಳಕ ಹುಡುಕುತ
ಯಾರು ಇತ್ತರಿದನು ಎಂಬ ಪ್ರಶ್ನೆ ಬೆಳಕ ನೋಡುತ

ಹೊಸದು ಚಿತ್ರ ಅತ್ತ ಇತ್ತ ಚಿತ್ತ ಸೂರೆ ಮಾಡಿದೆ
ತರದು ತರದು ಬಣ್ಣ ಬಣ್ಣ ಕಣ್ಣು ಮನವ ಮರೆಸಿದೆ

ನಿದ್ದೆಯಲ್ಲಿ ಕನಸು ಬಿತ್ತು ಗುಮ್ಮ ಬರಲು ಹೆದರುವೆ
ಅಮ್ಮ ಬಂದು ಮಮ್ಮ ಕೊಡಲು ನಕ್ಕು ಹೊದ್ದು ಮಲಗುವೆ

ಮತ್ತೆ ಸುತ್ತ ಕತ್ತಲಾಗೆ ಅತ್ತು ಅತ್ತು ಕರೆಯುವೆ
ಗಾಳಿ ಬೆಳಕು ಬೇಕು ನನಗೆ ಮತ್ತೆ ಸಿಟ್ಟು ಮಾಡುವೆ

ಸಿಟ್ಟು ಬಂತು ನನಗೆ ಇಂದು ಮುಷ್ಟಿ ಬಿಗಿದು ಗುದ್ದುವೆ ಮುದ್ದು ಗುದ್ದು ಎಂಬರಿವರು ಮತ್ತೆ ಸುಮ್ಮನಾಗುವೆ

ಯಾವ ತರದಿ ಖುಷಿಯ ಸಾಲ ಪಡೆದೆ ನಾನು ಇವರಲಿ
ಇರಲಿ ಈಗ ತೀರಿಸುವೆನು ಬಡ್ಡಿಸಹಿತ ಕೊಡುತಲಿ

Tuesday, 9 April 2019

ಬೆಳಗಿನ ಗಝಲ್


ಮಂಜು ಮುಸುಕಿದ ಬೆಳಗು ದಿನಕರನ ಉದಯ
ರಂಗಿನಾಟವು ಪ್ರಕೃತಿಗಿದು ಪರಿಣಯದ ಸಮಯ

ಕಿರಣ ಕರಗಳನು ತರಣಿ ಧರೆಯತ್ತ ಚಾಚಿ
ಬರಸೆಳೆದ, ಹಸಿರು ಭುವಿ ಕೆಂಪಾಯ್ತು ನಾಚಿ

ಉಡಲು ಪೀತಾಂಬರವ ಹೊಂಬಣ್ಣದಂಬರವು
ಆಗಸದಿ ಖಗಕುಲದ ಚಿಲಿಪಿಲಿಯ ಪದವು

ಎಳೆ ಬಿಸಿಲ ಬಿಸಿಯುಸಿರು ಸೋಕಿರಲು ಭುವಿಯ
ಒಲವು ಅರಳಿತು ಮೊಗ್ಗು ಹೂವಪ್ಪ ಸಮಯ

ಇಬ್ಬನಿಯ ಹನಿ ಮುತ್ತು ಜೇಡ ಜಾಲದಲಿ
ಸರದಂತೆ ಸುರಿದಿಹವು ಈ ಸುರತ ಕಾಲದಲಿ

ಸುಮಗಳನು ಇಬ್ಬನಿಯು ತಬ್ಬಿರುವ ರೀತಿ
ಸರಸದಲಿ ಮೈಮರೆತ ಇಬ್ಬದಿಯ ಪ್ರೀತಿ

ತರಣಿ ಧರಣಿಯ ಮಿಲನ ಬಣ್ಣವಾಡುವ ಕೂಟ
ಮದುಮಕ್ಕಳಿಗಿಂದು ಬಣ್ಣದೋಕುಳಿಯ ಆಟ

ನಶೆಗಿಂತ ನಿಶೆಯ ಶಶಿ ಬಲು ಚಂದ ಎಂದು
ಮದುಮಗನ ಭಾವದಲಿ ಕಾಣುತಿದೆ ಇಂದು

ಕಚಗುಳಿಯು ಕಳೆದೋಯ್ತು ರೋಮಾಂಚದಲ್ಲಿ
ಲಜ್ಜೆಯುಳಿದಿದೆ ಕೊಂಚ ಮಧುಮಂಚದಲ್ಲಿ

Thursday, 28 March 2019

ಬದುಕಿನ ದೋಣಿ


ಮಳೆಯಿರಲಿ ಬಿಸಿಲಿರಲಿ
ಚಳಿಯಿರಲಿ ಹಗಲಿರುಳು
ಹೊಳೆಯ ದಡಗಳ ನಡುವೆ
ಇವನ ಬದುಕು

ಮರದ ದೋಣಿ ಅಗಲ ಹುಟ್ಟು
ಎರಡು ಕೋಲು ಉಳ್ಳಂಡಿಗೆ
ಹುಟ್ಟು ಹಾಕಿ ನೀರು ನೂಕಿ
ಬದುಕ ಬಂಡಿ ತಳ್ಳುವ

ದಡವ ಸೇರಿ ಧಿಗ್ಗನಿಳಿದು
ನಡೆದರೆಷ್ಟೋ ಪಥಿಕರು
ಗೂಟಕೆಳೆದು ಕಟ್ಟಿದಂತೆ
ತೆಪ್ಪದ ಬಾಳಿವನದು

ಇವಗೆ ದೋಣಿ ದೋಣಿಗಿವನು
ಮುಳುಗದಂತೆ ತಡೆಯಲು
ಮನದಿ ಭಾರ ಹೊತ್ತ ಬದುಕು
ತೇಲುತಿಹುದು ಮುಳುಗಿಯೂ

ಹೊಳೆಯ ನೀರು ಕಡಿಮೆಯಾಗೆ
ಬದುಕ ದೋಣಿ ತೇಲದು
ಇವನ ಬೆವರು ಬಸಿದು ಬಸಿದು
ಹೊಳೆಯದೆಂದೂ ಬತ್ತದು!!

ಜನರ ದೊರೆಯು ಬಂದನಂದು
ನದಿಗೆ ಸೇತು ಹೆಣೆದರು
ಜನರ ದಡಕೆ ಸೇರಿಸುವನ
ಬದುಕ ಸೇತು ಮುರಿದರು

ದಡದಿ ದೋಣಿ, ಹಗ್ಗ ಬಿಗಿಸಿ
ಕೊಂಡು ಇತ್ತು ತಿಂಗಳು
ಸೋತ ಕಥೆಯ ಹೇಳುತಿತ್ತು
ಬತ್ತಿಹೋದ ಕಂಗಳು

ಹಗ್ಗ ಹರಿದು ಸೂತ್ರವಿರದೆ
ದೋಣಿ ತೇಲಿಹೋಯಿತು
ಹಗ್ಗ ಕುಣಿಕೆಯಾಯ್ತು ಇತ್ತ
ಬದುಕು ಅಂತ್ಯವಾಯಿತು

Tuesday, 26 March 2019

ನನ್ನ ಪುಟ್ಟ ಕಂದ


ತಿಂಗಳಿಂದ ನವ ನವೀನ ಆನಂದವ ತರುತಿಹ
ತಾಯ ಮಡಿಲಿನಲ್ಲಿ ನನ್ನ ಪುಟ್ಟ ಕಂದ ಮಲಗಿಹ

ಮೃದುಲ ಕೆನ್ನೆ ಚಿಕ್ಕ ಮೂಗು ಕಣ್ಣ ನೋಟ ಪಿಳಿಪಿಳಿ
ಬೊಚ್ಚು ಬಾಯಿ ದುಂಡು ಮೊಗವು ಕಿವಿಯು ಸ್ವಲ್ಪ ಒಳಸುಳಿ

ಬಾಯಿ ತುಟಿಯ ಹೊರಳಿಸುತ್ತ ಏನೋ ಹೇಳಲೆಣಿಸುವ
ತನ್ನ ಮಾತು ತಿಳಿಯದವರು, ತಿರುಗಿ ಅತ್ತು ತಿಳಿಸುವ

ಪುಟ್ಟ ಕೈಯ ಬೆರಳುಗಳನು ಮಡಿಸಿ ಏನೋ ಎಣಿಸುವ
ಅಮ್ಮ ನೋಡು ಹೊಸದು ಮುದ್ರೆ ಎನುತ ಕೈಯ ಕುಣಿಸುವ

ನಂದ ಕಂದ ಧರೆಗೆ ಬಂದ ಚಂದದಿಂದ ನಂದನ
ಆನಂದದ ಹೊನಲು ತಂದ ಮನೆಯಿದೀಗ ನಂದನ