Search This Blog

Wednesday, 31 December 2014

ಕೊಡಚಾದ್ರಿಯ ಅಗ್ರದತ್ತ



ಅಂದು ಡಿಸೆಂಬರ್ 26, ಶುಕ್ರವಾರ. ಸುಮಾರು ಒಂದು ವಾರದ ಹಿಂದೆ ನಿಗದಿಪಡಿಸಿದಂತೆ ನಮ್ಮ ಸಣ್ಣ ತಂಡ ಶಿವಮೊಗ್ಗ ಜಿಲ್ಲೆಯಲ್ಲಿರುವ ಕರ್ನಾಟಕದ ಉನ್ನತ ಶಿಖರಗಳಲ್ಲೊಂದಾದ ಕೊಡಚಾದ್ರಿಯ ಪಯಣಕ್ಕೆ ಸಜ್ಜಾಗಿತ್ತು. ಕೊಡಚಾದ್ರಿ ಕರ್ನಾಟಕದ ಹತ್ತನೇ ಎತ್ತರದ ಪರ್ವತ ಶಿಖರ. ಇದು ಶಿವಮೊಗ್ಗದಿಂದ ಸುಮಾರು 80 ಕಿಲೋಮೀಟರ್, ಸಿರಸಿಯಿಂದ 120 ಕಿಲೋಮೀಟರ್ ಮತ್ತು ಕೊಲ್ಲೂರಿಂದ 29 ಕಿಲೋಮೀಟರ್ ದೂರದಲ್ಲಿದೆ. ಪಶ್ಚಿಮ ಘಟ್ಟದ ಸಮೃದ್ಧ ಸಸ್ಯ ಸಂಪತ್ತಿನ ಆಗರವಾಗಿರುವ ಕೊಡಚಾದ್ರಿ ಪ್ರಾಕೃತಿಕ ಸುಂದರ ತಾಣ. ಮೂಕಾಂಬಿಕಾ ದೇವಸ್ಥಾನ, ಸರ್ವಜ್ಞ ಪೀಠ, ಗುಹೆ ಗಣಪತಿ ಮತ್ತು ಶಿಖರದ ತುದಿಯಿಂದ ತೋರುವ ಸೂರ್ಯಾಸ್ತ, ಸೂರ್ಯೋದಯದ ನೋಟ, ಇವು ಇಲ್ಲಿನ ಪ್ರವಾಸಿಗರ ಆಕರ್ಷಣೆಗಳು. ಎರಡು ದಿನಗಳ ಕಾಲದ ನಮ್ಮ ಪಯಣದ ಸಣ್ಣ ಚಿತ್ರಣ ಇಲ್ಲಿದೆ.

ನಮ್ಮ ಪಯಣ ಸಿರಸಿಯಿಂದ ಶುರುವಾಯ್ತು. ನಾನು ಬೆಳಿಗ್ಗೆ ಕಲ್ಲೇಶ್ವರದಿಂದ 6 ಗಂಟೆಗೆ ಹೊರಟು 8.30 ರ ಹೊತ್ತಿಗೆ ಸಿರಸಿ ತಲುಪಿದೆ. ಅಲ್ಲಿ ನಮ್ಮ ಸಹಪಾಠಿ ಕಾಂತರಾಜ್, ನಂದಕುಮಾರ್, ವಿನಾಯಕ ಮತ್ತೆ ನಮ್ಮ ಗೆಳೆಯ, ವೆಬ್ ಡಿಸೈನರ್ ಅಜಯ್ ಜೊತೆಯಾದರು. ಸುಮಾರು 9 ಗಂಟೆಗೆ ನಮ್ಮ ಸವಾರಿ ಹೊರಟಿತು. ಅಜಯ್ ತನ್ನ ಪಲ್ಸರ್‍ನಲ್ಲಿ, ನಾನು ವಿನಾಯಕನ ಸಿಬಿಝಿನಲ್ಲಿ ಮತ್ತೆ ನಂದು, ಕಾಂತುನ ಶೈನ್‍ನಲ್ಲಿ ಕೊಡಚಾದ್ರಿಯತ್ತ ಮುಖ ಮಾಡಿದೆವು. ಅಜಯ್ ಅದಾಗಲೇ ಒಮ್ಮೆ ಕೊಡಚಾದ್ರಿಗೆ ಭೇಟಿ ನೀಡಿದ್ದ. ಅಲ್ಲಿನ ರಸ್ತೆಗಳ ಬಗ್ಗೆ, ಸ್ಥಳದ ಬಗ್ಗೆ ಸಣ್ಣ ವಿವರ ಅವನಲ್ಲಿತ್ತು. ಎಲ್ಲರೂ ಚಿತ್ರದಲ್ಲಿ ನೋಡಿದ್ದ ಕೊಡಚಾದ್ರಿಯ ಸೌಂದರ್ಯದ ನೆನಪು ಮಾಡಿಕೊಳ್ಳುತ್ತಾ ಸಿದ್ದಾಪುರಕ್ಕೆ ತಲುಪಿದೆವು. ಅಲ್ಲಿ ಚಹ ವಿರಾಮ ಮಾಡಿ ಮುಂದೆ ಸಾಗರದತ್ತ ಸಾಗಿದೆವು. ಅಲ್ಲಿ ಸ್ಥಳೀಯರಿಂದ ಮುಂದಿನ ದಾರಿಯ ಬಗ್ಗೆ ಮಾಹಿತಿ ಪಡೆದು, ಅವರು ಹೇಳಿದಂತೆ ಹಸಿರುಮಕ್ಕಿ ತಲುಪಿದೆವು. ಅಲ್ಲಿಂದ ನಮ್ಮ ನಿಜವಾದ ಪಯಣ ಶುರು.

ಹಸಿರುಮಕ್ಕಿ ಒಂದು ಪುಟ್ಟ ಹಳ್ಳಿ. ಗೇರುಸೊಪ್ಪೆ ಶರಾವತಿ ಆಣೆಕಟ್ಟಿನ ಹಿನ್ನೀರು ಅಲ್ಲಿಯವರೆಗೂ ಚಾಚಿದೆ. ಸರಕಾರದ ಬಂದರು ಇಲಾಖೆಯಿಂದ ಹಿನ್ನೀರನ್ನು ದಾಟಿ ಹೋಗಲು ಬಾರ್ಜ ವ್ಯವಸ್ಥೆಯಿದೆ. ಬಸ್, ಲಾರಿ, ಕಾರ್, ಜೀಪ್‍ಗಳ ಜೊತೆ ನಮ್ಮ ವಾಹನಗಳನ್ನೂ ತೂರಿಸಿಕೊಂಡು ಬಾರ್ಜ ಹೊರಟಿತು. ಬಾರ್ಜನ ಮೇಲ್ಭಾಗದಲ್ಲಿನ ಡ್ರೈವರ್ ಕ್ಯಾಬೀನನಲ್ಲಿ ನಮ್ಮ ಸಣ್ಣದೊಂದು ಫೋಟೊಗ್ರಫಿಯೂ ನಡೆಯಿತು. ಸುತ್ತಲೂ ಚಾಚಿದ ಸಿಹಿನೀರಿನ ಸಾಗರದ ನಡುನಡುವೆ ದ್ವೀಪದಂತೆ ಕಾಣುವ ಮಾನ್‍ಗ್ರೂವ್ ಸಸ್ಯಕ್ಷೇತ್ರ. ಬಾರ್ಜಗೆ ಬಡಿಯುವ ಸಣ್ಣಪುಟ್ಟ ಅಲೆಗಳು. ಬಸ್, ಕಾರುಗಳನ್ನ ಹೊತ್ತ ಬಾರ್ಜ ಆ ಅಲೆಗಳ ತುಯ್ದಾಟದ ಪರಿವೆಯೂ ಇಲ್ಲದೆಯೇ ಸಾಗಿತ್ತು. ಸುಮಾರು ಹತ್ತು- ಹದಿನೈದು ನಿಮಿಷಗಳಲ್ಲಿ ನಾವು ಆಚೆ ದಡದಲ್ಲಿದ್ದೆವು. ಆಗ ಗಂಟೆ ಹನ್ನೆರಡು, ಕೊಡಚಾದ್ರಿಯಿಂದ ಸುಮಾರು 30 ಕಿಲೋಮೀಡರ್ ದೂರ. ಮತ್ತೊಮ್ಮೆ ತಿರುಗಿ ನೋಡಿ ಕಣ್ಣು ಹಾಯಿಸಿದಷ್ಟೂ ದೂರವಿರುವ ಆ ಹಿನ್ನೀರಿನ ಸೌಂದರ್ಯವನ್ನು ಸವಿದು, ಸಂಪೇಕಟ್ಟೆಯತ್ತ ನಮ್ಮ ತಂಡ ಮುಂದರಿಯಿತು.
ಹಸಿರುಮಕ್ಕಿ ಬಾಜ್೵ ನಿಂದ ಒಂದು ನೋಟ

1 ಗಂಟೆ ಸಮಯಕ್ಕೆ ನಾವು ಕಟ್ಟಿನಹೊಳೆ ಊರಲ್ಲಿದ್ದೆವು. ಕಟ್ಟಿನಹೊಳೆ ಕೊಡಚಾದ್ರಿಯ ಬೆಟ್ಟದ ತಳಭಾಗ. ಅಲ್ಲೇ ನಾಲ್ಕೈದು ಅಂಗಡಿಗಳು, ಸಣ್ಣ ಉಪಹಾರ ಗೃಹಗಳು. ಎಲ್ಲರಿಗೂ ಹೊಟ್ಟೆ ಚುರುಗುಟ್ಟುತ್ತಿತ್ತು. ಹೊಟ್ಟೆಗೆ ಚಿತ್ರಾನ್ನ ಬಿತ್ತು. ಹಸಿವು ಕೆಲಮಟ್ಟಿಗೆ ತಣಿಯಿತು. ಬಹುತೇಕ ಎಲ್ಲರೂ ಕಟ್ಟಿನಹೊಳೆಯಿಂದ ಸ್ಥಳೀಯರ ಕಮಾಂಡರ್ ಜೀಪ್ ಬಾಡಿಗೆ ಪಡೆದು ಹೋಗುವ ಪರಿಸ್ಥಿತಿ ಇದೆ. ಯಾಕೆಂದರೆ ಅಲ್ಲಿಂದ ಮುಂದೆ 14 ಕಿಲೋಮೀಟರ್ ದಾರಿ ಬಹು ಕಡಿದಾದದ್ದು. ಸಾಮಾನ್ಯರು ವಾಹನ ನಡೆಸುವ ರಸ್ತೆಯೇ ಅಲ್ಲ. ನಿಪುಣ ಜೀಪ್ ಡ್ರೈವರ್‍ಗಳು ಮಾತ್ರ ಅಲ್ಲಿ ವಾಹನ ಚಾಲನೆ ಮಾಡುತ್ತಾರೆ. ಅಜಯ್ ಹೇಳಿದ "ಇಲ್ಲಿಂದ ಭಯಾನಕ ರಸ್ತೆ ಪ್ರಾರಂಭ, ಬಹು ನಿಧಾನವಾಗಿ ಹೋಗಬೇಕು, ಗಡಿಬಿಡಿ ಮಾಡಬೇಡಿ, ಮೇಲಿಂದ ಕೆಳಗಿಂದ ಜೀಪ್‍ಗಳು ಬರುತ್ತಿರುತ್ತವೆ, ನೋಡಿಕೊಂಡು ಹೋಗುವಾ". ಅವನಿಂದ ಉಳಿದವರಿಗೆ ಸಣ್ಣಪುಟ್ಟ ಸಲಹೆ ಸಿಕ್ಕಿತು. ಅಲ್ಲಿ ಕಾದು ಕುಳಿತವರೂ ಬೈಕ್‍ನಲ್ಲಿ ಹೋಗುವವರು, ಮುಖ್ಯವಾಗಿ ಹಿಂದೆ ಕುಳಿತವರು ಗಟ್ಟಿ ಇರಬೇಕೆಂದು ಉಚಿತ ಸೂಚನೆ ಕೊಟ್ಟರು. ಅಲ್ಲಿಂದ ಮುಂದೆ 14 ಕಿಲೋಮೀಟರ್‍ಗಳ, ಎರಡು ಗಂಟೆಗಳ ಅಸಾಧ್ಯ ಮಣ್ಣಿನ ಹೊಂಡ, ಕಲ್ಲುಗಳ ರಸ್ತೆಯಲ್ಲಿ 3 ಬೈಕ್‍ಗಳ ಪ್ರಯಾಣ.
ಕಡಿದಾದ ರಸ್ತೆಗಳಲ್ಲಿ ಕಮಾಂಟರ್ ಜೀಪ್ ಗಳ ಓಡಾಟ. U ಆಕಾರದ ಏರಿಳಿತದ ತಿರುವುಗಳು

ಕೇವಲ ಹತ್ತು ನಿಮಿಷಗಳಲ್ಲೇ ನಮಗೆ ಆ ರಸ್ತೆ ಪರಿಸ್ಥಿತಿ ಅರ್ಥವಾಗತೊಡಗಿತು. ಅದು ಕೇವಲ ದಾರಿಯಷ್ಟೇ, ರಸ್ತೆ ಅಂತ ಹೇಳುವ ಹಾಗೇ ಇಲ್ಲ. ರಸ್ತೆಗಳು ಸೈನ್ ವೇವ್, ಕೊಸ್ ವೇವ್ ರೀತಿಯೇ ಇದೆ. ಎರಡು ಕಿಲೋಮೀಟರ್ ಸಾಗುವಷ್ಟರಲ್ಲೇ ನಮಗೆಲ್ಲಾ ಬೆವರಿಳಿಯತೊಡಗಿತು. ಆ ರಸ್ತೆ, ಮಲೆನಾಡಿನ ಮಳೆಗಾಲದ ನಂತರ ಕಾಡಿನಲ್ಲಿ ನೈಸರ್ಗಿಕವಾಗಿ ತಯಾರಾಗುವ ನೀರಿನ ಕಾಲುವೆ ಥರಾನೇ ಇತ್ತು. ಜೊತೆಗೆ ಧೂಳು ಹಾರಿಸುತ್ತಾ ಅಸಾಧ್ಯ ವೇಗದಲ್ಲಿ ಬರುವ ಜೀಪ್‍ಗಳ ಅಬ್ಬರ. ಕೆಲವು ಕಡೆ ಬದಿಗೆ ಬೈಕ್ ನಿಲ್ಲಿಸಲೂ ಜಾಗವಿಲ್ಲ. ಜೀಪ್‍ಗಳಿಗೆ ಸೈಡ್ ಕೊಡಲೂ ಸ್ಥಳವಿಲ್ಲ. ನಿರಂತರವಾಗಿ 14 ಕಿಲೋಮೀಟರ್ ಕ್ರಮಿಸುವುದಂತೂ ಅತ್ಯಂತ ಕಷ್ಟ. ಕಲ್ಲುಗಳ ಮೇಲೆ ಬೈಕ್ ಹಾರಿಸುತ್ತಾ, ಎರಡೂ ಕಡೆ ಕಾಲು ಕೊಡುತ್ತಾ ಸಮತೂಗುಸಿಕೊಳ್ಳುತ್ತಾ ಸಾಗುದೆವು. ಅಲ್ಲಿನ ರಸ್ತೆಗಳು, ಒಂದಕ್ಕೊಂದು ಹೊಂದಿಕೊಂಡಿರುವ ಯು ಆಕಾರದ ಮಜಲುಗಳಲ್ಲಿವೆ. ಸುಮಾರು ನಾಲ್ಕೈದು ಮಜಲುಗಳಲ್ಲಿ ಬರುವ ಹೋಗುವ ಜೀಪ್‍ಗಳು ಕಾಣುತ್ತವೆ. ತಿರುವುಗಳಲ್ಲಂತೂ ಜೀಪ್ ಎದುರಿಗೆ ಬಂತೆಂದರೆ ಹಿಂದೆ, ಮುಂದೆ ಅಲುಗಾಡಲೂ ಸಾಧ್ಯವಿಲ್ಲ. ಹಾಗೂ ಹೀಗೂ ಮಾಡಿ ನಮ್ಮ ಸವಾರಿ ಹೋಗುತ್ತಿತ್ತು. ಮುಂದೆ ಸಾಗುತ್ತಿದ್ದ ಅಜಯ್ ಅಲ್ಲಲ್ಲಿ ನಿಲ್ಲುತ್ತಿದ್ದ. ನಾವೂ ಅಲ್ಲಿ ನಿಂತು ಸಾವರಿಸಿಕೊಂಡು ನಮ್ಮ ನಮ್ಮ ಅನುಭವ ಹೇಳಿಕೊಳ್ಳುತ್ತಾ ಮುಂದರಿಯುತ್ತಿದ್ದೆವು. ಕೆಲವೊಂದು ಕಡೆಯಂತೂ ಬೈಕ್‍ನಲ್ಲಿ ಇಬ್ಬರು ಹೋಗಲು ಸಾಧ್ಯವೇ ಆಗದಂತ ಸ್ಥಿತಿ ಇದೆ. ಅಂಥ ರಸ್ತೆಯಲ್ಲೂ ಕೂಡಾ ಜೀಪ್‍ಗಳು ಒಂದನ್ನೊಂದನ್ನು ಹಿಂದಿಕ್ಕಿ ಹೋಗುವುದನ್ನು ನೋಡಿ ರೋಮಾಂಚನವಾಯಿತು. ಆ ಚಾಲಕರ ಚಾಕಚಕ್ಯತೆ ಮೇಲೂ ನಮ್ಮ ಚರ್ಚೆ ನಡೆಯಿತು. ಒಮ್ಮೆ ಎಡಗಡೆ, ಮತ್ತೊಮ್ಮೆ ಬಲಗಡೆ ವಾಲುತ್ತ ಚಲಿಸುವ ಜೀಪ್‍ಗಳಲ್ಲಿ ಹೋಗುವುದಿರಲಿ, ಅದನ್ನು ನೋಡಲೂ ನಮಗೆ ಭಯವಾಯಿತು, ಜೊತೆಗೆ ವಿಚಿತ್ರವೂ ಅನಿಸಿತು. ಒಮ್ಮೆ ಕೊಡಚಾದ್ರಿಗೆ ಭೇಟಿ ನೀಡಿದವರು ಮತ್ತೆ ಬರುವ ಸಾಧ್ಯತೆ ಅತ್ಯಂತ ಕಡಿಮೆಯೇನೋ ಎಂಬ ವಿಚಾರ ಬಂದುಬಿಟ್ಟಿತು. ಆದರೆ ನಮ್ಮ ಜೊತೆ ಇರುವ ಅಜಯ್ ಅದಕ್ಕೆ ವಿರುದ್ಧ. ಒಮ್ಮೆ ಅಲ್ಲಿನ ಪ್ರಯಾಣದ ಪರಿಚಯವಿದ್ದೂ ನಮಗೆ ಸಾಥ್ ನೀಡಿದ ಅವನ ಸಾಹಸಕ್ಕೆ ಹಾಟ್ಸಾಫ್ ಹೇಳಿ, ಮುಂದಿನ ದಾರಿಯ ಕಷ್ಟದ ಬಗ್ಗೆ ವಿಚಾರ ಮಾಡುತ್ತ ಮುಂದಡಿಯಿಟ್ಟೆವು. ಜೀಪ್‍ನಲ್ಲಿ ಸಾಗುವವರೆಲ್ಲರೂ ನಮಗೆ ಕೈ ತೋರಿಸಿ ಹೋಗುತ್ತಿದ್ದರು. ನಮ್ಮ ಪ್ರಯಾಣಕ್ಕೆ ಶುಭ ಹಾರೈಕೆಯೋ, ಆ ರಸ್ತೆಯ ಸ್ಥಿತಿಯಲ್ಲಿ ಬೈಕ್‍ನಲ್ಲಿ ಹೋಗುವ ನಮ್ಮ ಧೈರ್ಯದ ಮೇಲಿನ ಮೆಚ್ಚುಗೆಯೋ ನಮಗೆ ಅರ್ಥವಾಗುತ್ತಿರಲಿಲ್ಲ. ಒಟ್ಟಿನಲ್ಲಿ ನಮ್ಮ 3 ರಥಗಳು, ಏರುತ್ತಾ, ಇಳಿಯುತ್ತಾ, ವಾಲುತ್ತಾ, ಕುಲುಕುತ್ತಾ ಸಾವಕಾಶವಾಗಿ ಮುಂದೆ ಸಾಗುತ್ತಿತ್ತು.

ಸುಮಾರು 1 ಗಂಟೆಯಲ್ಲಿ ದಟ್ಟ ಕಾನನವನ್ನು ದಾಟಿ ಸಮತಟ್ಟಾದ ಜಾಗಕ್ಕೆ ಬಂದು ಮುಟ್ಟಿದೆವು. ಅರ್ಧ ದಾರಿ ಕ್ರಮಿಸಿ ಆಗಿತ್ತು. ಆಗಲೇ ಕೈಗಡಿಯಾರ 3 ಗಂಟೆ ತೋರಿಸುತ್ತಿತ್ತು. ಸುತ್ತಲೂ ಕಣ್ಣು ಹಾಯಿಸಿದರೆ ಎರಡು ಕಡೆ ಪ್ರಪಾತ, ಒಂದು ಕಡೆ ಬಂದ ಇಳಿಜಾರು, ಮತ್ತೊಂದು ಕಡೆ ಕಡಿದಾದ ಬೆಟ್ಟ. ಒಣಗಿದ ಹುಲ್ಲಿನ ಬೆಟ್ಟಗಳು ಮನಮೋಹಕವಾಗಿ ಕಾಣುತ್ತಿದ್ದವು. ಕೈ ಕಾಲೆಲ್ಲಾ ಕೆಂಪು ಬಣ್ಣಕ್ಕೆ ತಿರುಗಿತ್ತು. ಟಿ-ಶರ್ಟ ಮೇಲೆ ಧೂಳು ಧಾರಾಳವಾಗಿ ಕೂತಿತ್ತು. ರವಿ ಇನ್ನೂ ಬಿಸಿಯನ್ನು ಸೂಸುತ್ತಿದ್ದ. ಅಲ್ಲಿ ಧಾರಾಳವಾಗಿ ಬಿಸಿಲಿನ ಝಳವಿತ್ತು. ಜೊತೆಗೆ ಎಲ್ಲರಿಗೂ ಆಯಾಸವೂ ಆಗಿತ್ತು. ಬ್ಯಾಕ್‍ಪ್ಯಾಕ್‍ನಲ್ಲಿರುವ ಕಿತ್ತಲೆ ಹಣ್ಣು, ಚಿಪ್ಸ್ ತಿಂದು ನೀರು ಕುಡಿದು ಮುಂದಿನ ಹಂತದ ದಾರಿ ಸವೆಸಲು ಅನುವಾದೆವು.
ಅಧ೵ ದಾರಿ ಕ್ರಮಿಸಿದಾಗ ಹಿಂತಿರುಗಿ ನೋಡಿದರೆ ಕಾಣುವ ವಿಹಂಗಮ ದೃಶ್ಯ
ಪ್ರಪಾತದ ನಡುವೆ ಕಡಿದಾದ ರಸ್ತೆಯಲ್ಲಿ ಮತ್ತೆ ಏರುತ್ತಾ, ಇಳಿಯುತ್ತಾ ಸಾಗಿ, 4 ಗಂಟೆ ಹೊತ್ತಿಗೆ ಕೊಡಚಾದ್ರಿಯ ಮೂಕಾಂಬಿಕ ದೇವಿಯ ದೇಗುಲದ ಬಳಿ ತಲುಪಿದೆವು. ಆ ಎರಡೂವರೆ ಗಂಟೆಯ ಪ್ರಯಾಣದಲ್ಲಿ ಎಲ್ಲರಿಗೂ ಸಾಕಷ್ಟು ಆಯಾಸ, ಮೈ-ಕೈ ನೋವು ಮೈದೋರಿತ್ತು. ಮತ್ತೆ ತಡಮಾಡುತ್ತಾ ಕುಳಿತುಕೊಳ್ಳಲು ಸಮಯವಿರಲಿಲ್ಲ. ಮತ್ತೂ 2 ಕಿಲೋಮೀಟರ್ ಬೆಟ್ಟ ಹತ್ತಬೇಕಿತ್ತು ಸೂರ್ಯಾಸ್ತಮಾನ ಸವಿಯಲು. ರಾತ್ರಿಯ ವಸತಿ ವ್ಯವಸ್ಥೆಯನ್ನೂ ವಿಚಾರಿಸಬೇಕಿತ್ತು. ದೇವರಿಗೆ ಕೈಮುಗಿದು, ದೇವಸ್ಥಾನದ ಅರ್ಚಕರ ಮನೆಯಲ್ಲೇ ವಿಚಾರ ಮಾಡಿದಾಗ ಅವರು ಒಪ್ಪಿಕೊಂಡರು. ಊಟದ ವ್ಯವಸ್ಥೆಯನ್ನು ಅಲ್ಲೇ ಮೇಲ್ಭಾಗದಲ್ಲಿರುವ ಐ.ಬಿ.ಯಲ್ಲಿ ಕೇಳಿದೆವು. ಅಲ್ಲಿನ ಕೋಣೆಗಳೆಲ್ಲಾ ಬುಕ್ ಆಗಿದ್ದವು. ಅಲ್ಲಿ ಸ್ವಾಮಿ ಎಂಬಾತ ಊಟ ಮಾಡಿಕೊಡಲು ಒಪ್ಪಿಕೊಂಡ. ಅವನ ಜೊತೆ ಹಾಗೆ ಸುಮ್ಮನೆ ಮಾತಿನ ಆಟವೂ ಆಯಿತು. ಮೊದಲು ಅಜಯ್ "ನಮಗೆ ವಸತಿ ವ್ಯವಸ್ಥೆ ಆಗಿಲ್ಲ, ಪರವಾಗಿಲ್ಲ, ಊಟ ಕೊಡಿ, ನಾವೆಲ್ಲಾದರೂ ಮಲಗುತ್ತೇವೆ" ಎಂದ. "ಹಾಗೆಲ್ಲಾ ಅಗೋಲ್ಲ, ವೈಲ್ಡ್ ಲೈಫ್‍ನವರು ಇಲ್ಲೆಲ್ಲೂ ಬೆಂಕಿ-ಗಿಂಕಿ ಹಾಕೋಕೆ ಕೊಡಲ್ಲ, ನೀವೇನೂ ವ್ಯವಸ್ಥೆ ಮಾಡಿಕೊಂಡು ಬರಲಿಲ್ಲವಾದರೆ ಸಂಜೆಯೇ ವಾಪಸ್ ಹೋಗಿ" ಸ್ವಾಮಿ ಸ್ವಲ್ಪ ಖಡಕ್ಕಾಗೇ ಅಂದ. ಆದಕ್ಕೆ ಅಜಯ್ "ನಾವು ಎಲ್ಲಿ ಇರತೇವೋ ಅಲ್ಲೇ ಮಲಗುತ್ತೇವೆ. ನಾವು ಹಾಗೇ" ತಣ್ಣಗಾಗೇ ಉತ್ತರಿಸಿದ. "ಏನೂ ವ್ಯವಸ್ಥೆ ಮಾಡಿಕೊಂಡಿಲ್ಲಾ ಅಂದ್ರೆ ವಾಟ್ ಡು ಯು ಮೀನ್" ಸ್ವಾಮಿಯ ಬಾಯಲ್ಲಿ ಇಂಗ್ಲೀಷ್ ಹೊರಬಿತ್ತು. ಈಗ ಅಜಯನ ಸರದಿ, "ನಾವು ಮೀಡಿಯಾದವರು, ನಮಗೆಲ್ಲಾ ಗೊತ್ತಿದೆ, ತೊಂದರೆಯಿಲ್ಲ". ಯಾವಾಗ ಮೀಡಿಯ ಎಂಬ ಪದ ಕಿವಿಗೆ ಬಿತ್ತೋ, ಸ್ವಾಮಿಯ ಮಾತಿನ ಧಾಟಿಯೇ ಬದಲಾಗಿಹೋಯಿತು. ಹೆಚ್ಚು ಹೊತ್ತು ಆಟ ಆಡಲು ಸಮಯವಿರಲಿಲ್ಲ. ಲಗುಬಗೆಯಿಂದ ಹೊರಟು, ಐವರೂ ಬೆಟ್ಟ ಹತ್ತಲು ಆರಂಭಿಸಿದೆವು.

ಎಲ್ಲರ ಕೈಯಲ್ಲೂ ಕ್ಯಾಮರಾ ಅಲ್ಲಿನ ಸುಂದರ ದೃಶ್ಯಗಳನ್ನು ಸೆರೆಹಿಡಿಯುತ್ತಿತ್ತು. ಒಂದರ್ಧ ಕಿಲೋಮೀಟರ್ ಕ್ರಮಿಸುವಷ್ಟರಲ್ಲಿ, ಕೊಡಚಾದ್ರಿಯ ನೈಜ ದರ್ಶನವಾಗತೊಡಗಿತು. ಬೆಟ್ಟದ ತಪ್ಪಲುಗಳು ಸುಂದರವಾಗಿ ಕಂಗೊಳಿಸತೊಡಗಿದವು. ಸ್ವಲ್ಪ ದೂರ ಹೋಗಿ ಬಲಭಾಗದ ಬೆಟ್ಟ ಏರತೊಡಗಿದೆವು. ಬೆಟ್ಟ ಏರಿದಂತೆ ಕೊಡಚಾದ್ರಿಯ ಸೌಂದರ್ಯ ನಮ್ಮ ಮನಸೂರೆಗೊಳ್ಳತೊಡಗಿತು. ಒಂದು ಕಡೆ ನೇರ ಪ್ರಪಾತ, ಮತ್ತೊಂದು ಕಡೆ ಒಣಗಿದ ಹುಲ್ಲಿನ ಇಳಿಜಾರಿನ ಬೆಟ್ಟ. ಒಬ್ಬರೇ ಸಾಗುವಷ್ಟು ಕಾಲುದಾರಿ. ಕೆಲವೊಂದು ಕಡೆ ಸ್ವಲ್ಪ ಆಯ ತಪ್ಪಿದರೂ ದುರಂತ ಗ್ಯಾರಂಟಿ. ಅವತ್ತು ಸಾಕಷ್ಟು ಜನ ರವಿಯ ಅಸ್ತದ ಅಂದ ಕಣ್ತುಂಬಿಕೊಳ್ಳಲು ಕೊಡಚಾದ್ರಿಯ ಅಗ್ರಕ್ಕೆ ಏರುತ್ತಿದ್ದರು. ಅದೊಂದು ಅದ್ಭುತ ದೃಶ್ಯ, ಎಷ್ಟು ದೂರ ಕಣ್ಣು ಹಾಯಿಸಿದರೂ ಬೆಟ್ಟದ ಸಾಲುಗಳು, ಒಣಗಿದ ಹುಲ್ಲಿನ ರಾಶಿ ಬೆಟ್ಟಕ್ಕೆ ತನ್ನದೇ ಆದ ಅಲಂಕಾರವನ್ನು ಮಾಡಿದ್ದವು. ಕೆಳಗೆ ಹಸಿರು ಕಾಡುಗಳೂ ಕಣ್ಣು ಕುಕ್ಕುತ್ತಿದ್ದವು. ಅಲ್ಲಲ್ಲಿ ಹಸಿರು ವನರಾಶಿ, ನಸು ಹಳದಿ ಬಣ್ಣದ ಹುಲ್ಲು ಅಲ್ಲೊಂದು ವಿಭಿನ್ನ ಚಿತ್ತಾರವನ್ನೇ ಮೂಡಿಸಿದ್ದವು. ಆ ಕ್ಷಣದಲ್ಲಿ ನಮ್ಮ ಆಯಾಸವೆಲ್ಲಾ ನಿರಾಯಾಸವಾಗಿ ಮಾಯವಾಯಿತು. ನಾ ಮುಂದು, ತಾ ಮುಂದು ಎಂದು ಸ್ಪರ್ಧೆಯೇರ್ಪಟ್ಟಂತೆ ಎಲ್ಲರೂ ಕೊಡಚಾದ್ರಿಯ ಶಿಖರಕ್ಕೆ ಕಣ್ಣು ನೆಟ್ಟರು.
ಸೂಯಾ೵ಸ್ತಮಾನದ ದೃಶ್ಯ
3 ಬೆಟ್ಟಗಳನ್ನು ಒಂದರ ಮೇಲೊಂದರಂತೆ ಮುಗಿಸಿ ಮುಂದೆ ಹೋಗುವಾಗ, ಬಲಭಾಗದಲ್ಲಿ ಗುಹೆ ಗಣಪತಿ ಎಂಬ ಫಲಕ ಕಂಡಿತು. ಆಗ 5 ಗಂಟೆ. ಇನ್ನೂ ಸಮಯವಿದೆಂದರಿತು, ಅತ್ತ ಹೆಜ್ಜೆ ಹಾಕಿದೆವು. ಎರಡು ನಿಮಿಷದಲ್ಲೆ ನಾನು, ಅಜಯ್, ವಿನಾಯಕ ಗುಹೆ ಗಣಪತಿಯ ಸನ್ನಿಧಿಯಲ್ಲಿದ್ದೆವು. ಪುಟ್ಟ ಗುಹೆಯೊಳಗೆ ಗಜಾನನನ ಮೂರ್ತಿ ರಾರಾಜಿಸುತ್ತಿತ್ತು. ಮೂರ್ತಿಯ ಎಡಭಾಗದಲ್ಲಿ ಸಣ್ಣ ಗುಹೆಯೊಂದು ಗೋಚರಿಸುತ್ತಿತ್ತು. ಗಣೇಶನಿಗೆ ಕೈಮುಗಿದು ಪ್ರಸಾದ ಸ್ವೀಕರಿಸಿ, ಅರ್ಚಕರಲ್ಲಿ ಆ ಗುಹೆಯ ಬಗ್ಗೆ ವಿಚಾರಿಸಿದೆವು. ಅದು ಆದಿಶಂಕರರು ಪ್ರತಿಷ್ಟಾಪಿಸಿದ ಗಣಪತಿ. ಶಂಕರಾಚಾರ್ಯರು ಆ ಗುಹೆಯಲ್ಲಿ ತಪಸ್ಸನ್ನಾಚರಿಸಿ ಮತ್ತು ಹಾಗೇ ಸಾಗಿ, ಸರ್ವಜ್ಞ ಪೀಠದ ಆಚೆ ಭಾಗದಲ್ಲಿರುವ ಚಿತ್ರಮೂಲವೆಂಬಲ್ಲಿಂಗೆ ಹೋಗುತ್ತಿದ್ದರಂತೆ. ಆ ಅರ್ಚಕರೂ ಆ ಗುಹೆಯಲ್ಲಿ ಸುಮಾರು 5 ನಿಮಿಷಗಳವೆರೆಗೆ ಸಾಗಿದ್ದರಂತೆ. ಮುಂದೆ ಗುಹೆ ಕಿರಿದಾಗುತ್ತಾ ಹೋಗಿದ್ದಲ್ಲದೇ, ಉಸಿರುಗಟ್ಟುವುದಕ್ಕೆ ಶುರುವಾಯಿತಂತೆ. ಸಂಪೂರ್ಣ ಗುಹೆಯನ್ನು ನೋಡಿದವರು ಯಾರೂ ಇಲ್ಲ ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡರು. ನಾವೂ ಹಾಗೇ ಸುಮ್ಮನೆ ಗುಹೆಯನ್ನು ಬಗ್ಗಿ ನೋಡಿ ಬಂದ ದಾರಿಗೆ ಹಿಂತಿರುಗಿದೆವು.

ಮತ್ತೈದು ನಿಮಿಷಗಳ ಹಾದಿ. ಕೊಡಚಾದ್ರಿಯ ಬಹುತೇಕ ಎತ್ತರವನ್ನು ನಾವು ತಲುಪಿದ್ದೆವು. ನಂದು ಮತ್ತು ಕಾಂತು ಗುಹೆ ಗಣಪತಿ ಗುಡಿಗೆ ಬಂದಿರಲಿಲ್ಲ. ನಾವು ಗುಹೆ ಗಣಪತಿ ದರ್ಶನ ಮಾಡುವುದರೊಳಗೆ ನಂದು ಮತ್ತು ಕಾಂತು ಅದಾಗಲೇ ನಮಗಿಂತ ಮುಂದೆ ಬೆಟ್ಟ ಹತ್ತುತ್ತಿದ್ದರು. ನಮಗಿಂತ ಹಿಂದಿದ್ದ ಅವರು ಈಗ ನಮ್ಮನ್ನು ಹಿಂದಿಕ್ಕಿದ್ದರು. ಮತ್ತೊಂದು ಅದ್ಭುತ ನೋಟ ನಮಗೆ ಕಾದಿತ್ತು. ಎರಡೂ ಕಡೆ ಎಲ್ಲೂ ಮುಗಿಯದ ಬೆಟ್ಟದ ಸಾಲುಗಳು, ರವಿಯ ಸಂಜೆಯ ಕಿರಣಗಳು ಘಟ್ಟದ ಸಾಲುಗಳಿಗೆ ಬಣ್ಣವೆರಚಿದ್ದವು. ಎಡಭಾಗದಲ್ಲಿ ಉದ್ದನೆಯ ಬೆಟ್ಟ ಚೀನಾದ ಮಹಾಗೋಡೆಯನ್ನು ನೆನಪಿಸಿತು. ಬಲಭಾಗದ ಬೆಟ್ಟ ನಮ್ಮನ್ನು ಕರೆಯುತ್ತಿತ್ತು. ತಣ್ಣನೆಯ ಗಾಳಿ, ನಯನಮನೋಹರ ದೃಶ್ಯ ನಮ್ಮ ಪ್ರಯಾಸದ ಪ್ರಯಾಣಕ್ಕೆ ಸಾರ್ಥಕತೆಯನ್ನು ನೀಡಿಬಿಟ್ಟವು. ಉನ್ನತ ಶಿಖರದ ಮೇಲೆ ನಿಂತರೆ ಏನೋ ಸಾಧಿಸಿದಂತೆ ಭಾಸವಾಯಿತು. ಕೊಡಚಾದ್ರಿಯ ತುತ್ತತುದಿಯಲ್ಲಿರುವ ಸರ್ವಜ್ಞ ಪೀಠದ ಕಡೆ ತಲೆಯೆತ್ತಿ ನೋಡಿದರೆ, ಅದಾಗಲೇ ಬಹಳ ಜನ ಅಲ್ಲಿಗೆ ತಲುಪಿಯಾಗಿತ್ತು. ಅವರನ್ನು ನೋಡಿ ನಮ್ಮ ಉತ್ಸಾಹ ಇಮ್ಮಡಿಸಿತು. ರವಿ ತನ್ನನ್ನು ತಾನು ಕೆಂಪಾಗಿಸಿಕೊಂಡು ಕೊಡಚಾದ್ರಿ ಪ್ರವಾಸಿಗರಿಗೆ ರಸಧಾರೆ ಹರಿಸಲು ಸನ್ನದ್ಧವಾಗತೊಡಗಿದ. ನಾವೂ ಅಲ್ಲಲ್ಲಿ ಕೆಂಬಣ್ಣದ ಸೂರ್ಯನ ಜೊತೆಗೆ ಬೆಟ್ಟದ ಗಿಡಗಂಟಿಗಳ ಸೊಬಗನ್ನು ಸೂರೆಗೊಳ್ಳುತ್ತಾ ಸರ್ವಜ್ಞ ಪೀಠದ ಮುಂದೆ ನಿಂತೆವು. ಸರ್ವಜ್ಞ ಪೀಠದಲ್ಲಿ ತಪೋನಿರತರಾದ ಶಂಕರಾಚಾರ್ಯರ ಮೂರ್ತಿ ಮನಸ್ಸನ್ನು ಶಾಂತವಾಗಿಸಿತು. ಧ್ಯಾನಮುದ್ರೆಯಲ್ಲಿರುವ ಶಾಂತಚಿತ್ತ ಶಂಕರರು ಸಣ್ಣ ದೀಪದ ಬೆಳಕಿನಲ್ಲಿ ಗರ್ಭಗುಡಿಯಲ್ಲಿ ನೈಜವಾಗಿ ಕುಳಿತಂತೆ ಕಾಣುತ್ತಿದ್ದರು. ಶಂಕರರಿಗೆ ಶಿರಸಾ-ಮನಸಾ ನಮಿಸಿ ಪಡುವಣದತ್ತ ತಿರುಗಿದರೆ ರವಿ ಪರ್ವತ ಸಾಲುಗಳ ಮಧ್ಯದಲ್ಲಿ ಮರೆಯಾಗಲು ತಯಾರಾಗುತ್ತಿದ್ದ. ಅದಾಗಲೇ ಅಜಯ್ ತುತ್ತತುದಿಯ ಗುಡ್ಡವನ್ನು ತಲುಪಿ ಟ್ರೈಪೊಡ್ ನಿಲ್ಲಿಸಿ ಸೂರ್ಯಾಸ್ತಮಾನದ ರಸನಿಮಿಷಗಳನ್ನು ಸೆರೆಹಿಡಿಯಲು ಸಿದ್ಧನಾಗಿದ್ದ. ನಾನು ವಿನಾಯಕ ಮತ್ತು ಕಾಂತು ಜೊತೆ ಕೆಲವೇ ನಿಮಿಷಗಳಲ್ಲಿ ಆಚೆ ತುದಿಯನ್ನು ಸೇರಿದೆ. ನಂದು ಬೇರೆ ಬೇರೆ ಕೋನಗಳಲ್ಲಿ ಫೋಟೊ ತೆಗೆಯುತ್ತ ಸರ್ವಜ್ಞ ಪೀಠದ ಹತ್ತಿರವೇ ಇದ್ದ. ನಾವು ಆ ಗುಡ್ಡವನ್ನು ತಲುಪುವ ವೇಳೆಗಾಗಲೇ ರವಿ ಕೆಂಪಾದ ಚೆಂಡಿನಂತಾಗಿ ಸುತ್ತಲೂ ಕೆನ್ನೀರ ಓಕುಳಿ ಹರಿಸುತ್ತಿದ್ದ. ಸೂರ್ಯನ ಎರಡೂ ಬದಿಗೆ ಮೋಡದ ಉದ್ದನೆಯ ಪದರವೊಂದು ಹರಡಿ, ಸೂರ್ಯಾಸ್ತದ ಮೆರುಗನ್ನು ಇನ್ನಷ್ಟು ಹೆಚ್ಚಿಸಿತ್ತು. ಎಲ್ಲರೂ ಬಂಗಾರದ ಬಣ್ಣದಲ್ಲಿ ಮಿಂಚುತ್ತಿದ್ದೆವು. ಸೂರ್ಯ ಕ್ಷಣಕ್ಷಣಕ್ಕೂ ಕೆಂಪು, ಕಿತ್ತಲೆ, ನಸು ಹಳದಿ ಬಣ್ಣಗಳನ್ನು ಸರದಿ ಪ್ರಕಾರವಾಗಿ ಕೂಡಿಸಿ ಆಡುತ್ತಾ ಕೊಡಚಾದ್ರಿಯ ಪರ್ವತ ಸಾಲುಗಳನ್ನು ವಿಭಿನ್ನ ತೆರನಾಗಿ ಪ್ರದರ್ಶಿಸಿದ ಆ ನಿಮಿಷಗಳು ನಿಜಕ್ಕೂ ಅವರ್ಣನೀಯ. ಕೆಲವೇ ನಿಮಿಷಗಳ ಈ ವಿಹಂಗಮ ನೋಟ ರವಿಯ ನಿರ್ಗಮನದೊಡನೆ ಸಾವಕಾಶವಾಗಿ ಮರೆಯಾಯಿತು. ಆ ದೃಶ್ಯದಿಂದ ಹೊರಬರಲು ನಮಗೆ ಕೆಲ ಹೊತ್ತು ಹಿಡಿಯಿತು. ಅಷ್ಟರಲ್ಲಾಗಲೇ ನಂದು ನಮ್ಮನ್ನು ಸೇರಿದ. ಅಲ್ಲೇ ಕೆಲಹೊತ್ತು ಫೋಟೊಗ್ರಫಿ ನಡೆಸಿ ಮತ್ತೆ ಸರ್ವಜ್ಞ ಪೀಠದ ಸಮೀಪಕ್ಕೆ ತಿರುಗಿ ಬಂದೆವು.

ಬಹುತೇಕ ಅಲ್ಲಿ ಬಂದಿದ್ದ ಪ್ರವಾಸಿಗರೆಲ್ಲರೂ ತಿರುಗಿ ನಡೆದಿದ್ದರೂ, ನಮಗೆ ಅಷ್ಟು ಬೇಗನೇ ವಾಪಸಾಗುವ ಮನಸ್ಸಾಗಲಿಲ್ಲ. ಐವರೂ ಸರ್ವಜ್ಞ ಪೀಠದ ಎದುರಿಗೆ ಕುಳಿತು ಮನಸೋ ಇಚ್ಛೆ ಕೊಡಚಾದ್ರಿಯ ತಂಗಾಳಿಗೆ ಮೈಯೊಡ್ಡಿ ಮಾತನಾಡುತ್ತಾ ಕುಳಿತೆವು. ಮಬ್ಬುಗತ್ತಲು ಆವರಿಸತೊಡಗಿತು. ಕತ್ತೆತ್ತಿ ಮೇಲೆ ನೋಡಿದರೆ ಸ್ವಚ್ಛ ಆಗಸದಲ್ಲಿ ತಾರೆಗಳ ಚಿತ್ತಾರ, ಪರ್ವತದಿಂದ ಕತ್ತು ಬಗ್ಗಿಸಿದರೆ ಅಲ್ಲಲ್ಲಿ ಮೈದೋರಿದ ದೀಪಗಳು, ಕಾಡಿನ ಮಧ್ಯೆ ಊರು ಮತ್ತು ಜನರ ಇರವನ್ನು ಹೊರಗೆಡಹಿದವು. ಆ ವಿದ್ಯುದ್ದೀಪಗಳು ಕೊಡಚಾದ್ರಿಯ ತುದಿಯಲ್ಲಿರುವವರಿಗೆ ಅದೇನೋ ರಹಸ್ಯವನ್ನು ಬೆಳಕಿನ ರೇಖೆಗಳ ರೂಪದಲ್ಲಿ ಹೇಳಲು ಪ್ರಯತ್ನಪಡುತ್ತಿವೆಯೇನೋ ಎಂಬಂತೆ ತೋರುತ್ತಿದ್ದವು. ಒಟ್ಟಿನಲ್ಲಿ ಭೂ ವ್ಯೋಮಗಳಲ್ಲಿ ಏಕಕಾಲದಲ್ಲಿ ಮೂಡಿದ ಬೆಳಕಿನ ಚುಕ್ಕಿ-ಗೆರೆಗಳ ಚಿತ್ತಾರ ಚಿತ್ತಾಕರ್ಷಕವಾಗಿ ಕಂಡಿತು. ತಂದ ಚುರುಮುರಿ, ಚಿಪ್ಸ್, ಹಣ್ಣು ಮುಗಿಯುವವರೆಗೂ ಅಲ್ಲೇ ಕುಳಿತು ಹರಟೆ ಹೊಡೆಯುತ್ತ, ಒಬ್ಬರನ್ನೊಬ್ಬರು ತಮಾಷೆ ಮಾಡುತ್ತ ಬಹು ಸಮಯ ಕಳೆದು 7.30 ಗಂಟೆಗೆ ಆ ದಿನದ ಪ್ರವಾಸ ಮುಗಿಯಿತೆಂಬಂತೆ ಕೆಳಗಿಯತೊಡಗಿದೆವು. ನಾವು ಐವರು ಬಿಟ್ಟರೆ ಮತ್ತೆ ನರ ಪಿಳ್ಳೆಯೂ ಇಲ್ಲ. ನಮ್ಮ ಬಳಿ ಇದ್ದದ್ದು ಮೊಬೈಲ್ ಟಾರ್ಚ ಮಾತ್ರ. ಬೆಟ್ಟದ ಅಂಚಿನ ಆ ಕಾಲುದಾರಿಯಲ್ಲಿ ಸಾಲಾಗಿ ಇಳಿದು ಭಟ್ರ ಮನೆ ಮುಟ್ಟಿದಾಗ ರಾತ್ರಿ 8.30 ಗಂಟೆ.
ಮುಳುಗುವ ರವಿಯನ್ನು ಸೆರೆಹಿಡಿಯುವ ತಯಾರಿ
ಭಟ್ರ ಮನೆಯಲ್ಲೆ ಕೈಕಾಲು ಮುಖ ತೊಳೆದು ಐ.ಬಿ. ಗೆ ಹೋಗಿ ಊಟ ಮುಗಿಸಿ, ಮಾರನೇ ದಿನ ಸೂರ್ಯೋದಯ ವೀಕ್ಷಣೆಗಾಗಿ ಪ್ಲಾನ್ ಶುರು ಆಯಿತು. ವಿನಾಯಕ ಮತ್ತು ನಂದು ಅವತ್ತು ಬಹಳವೇ ಸುಸ್ತಾಗಿದ್ದರೇನೋ, ಬೆಳಿಗ್ಗೆ ಬರುವ ಆಸೆಯನ್ನು ವ್ಯಕ್ತಪಡಿಸಲಿಲ್ಲ. ನಾನು, ಅಜಯ್ ಮತ್ತು ಕಾಂತು ಹೇಗೂ ಬಂದದ್ದಾಗಿದೆ, ಸೂರ್ಯೋದಯವನ್ನೂ ನೋಡೇಬಿಡುವ ಅಂತ ನಿರ್ಧರಿಸಿ, ಭಟ್ರ ಮನೆಗೆ ಬಂದಾಗ ಹಾಸಿಗೆ, ಚಾದರ ತಯಾರಾಗಿತ್ತು. ಅವತ್ತಿನ ಆಯಾಸ ಪರಿಹಾರಕ್ಕೆ ಕೈ ಬೀಸಿ ಕರೆಯುತ್ತಿದ್ದ ಹಾಸಿಗೆಗೆ ಕ್ಷಣಮಾತ್ರದಲ್ಲಿ ಬಿದ್ದ ನಾವು ನಿದ್ದೆಗೆ ಜಾರಿದೆವು.

1.30-2 ಗಂಟೆಯವರೆಗೂ ಐವರೂ ಚೆನ್ನಾಗಿ ನಿದ್ರೆ ಮಾಡಿದರೂ, ಆ ಕೊರೆಯುವ ಚಳಿಗೆ ನಡುಕ ಹುಟ್ಟಿತು. ಅಷ್ಟಷ್ಟು ಹೊತ್ತಿಗೊಮ್ಮೆ ರಭಸದಿಂದ ಬೀಸುವ ಚಳಿಗಾಳಿಯ ಸದ್ದು ಕೇಳಿಸುತ್ತಿತ್ತು. ಆ ಚಳಿಗೆ ಒಂದೆರಡು ಚಾದರ ಎಲ್ಲಿ ಸಾಕಾಗಬೇಕು? ಮೈ ಥರಗುಟ್ಟುತ್ತಿತ್ತು. ನಂತರ ಕಣ್ಮುಚ್ಚಿ ಮಲಗಿದ್ದೇ ಬಿಟ್ಟರೆ, ಗಾಢನಿದ್ರೆ ಯಾರಿಗೂ ಹತ್ತಲಿಲ್ಲ ಅಂತ ಕಾಣತ್ತೆ. ಅಂತೂ 5 ಗಂಟೆ ಹೊಡೆಯಿತು. ಸೂರ್ಯೋದಯಕ್ಕೆ ಇನ್ನೊಂದೇ ಗಂಟೆ ಬಾಕಿ. ನಾನು ಎದ್ದು ಅಜಯನ ಮೈ ತಟ್ಟಿ ಕಾಂತುವನ್ನೂ ಎಬ್ಬಿಸಿದೆ. ನಂದು ಮತ್ತು ವಿನಾಯಕ ಮಲಗಿ ಗೊರಕೆ ಹೊಡೆಯುತ್ತಿದ್ದರು. ಸರಿ, ಅವರನ್ನೂ ಎಬ್ಬಿಸಿ ಹುರಿದುಂಬಿಸಿದೆವು. ನಂದು ಹೊರಡಲು ತಯಾರಾದ ಮೇಲೆ ವಿನಯಕನೂ ಅನುವಾದ. 5.30ಕ್ಕೆ ಮತ್ತೆ ಬೆಟ್ಟ ಏರುವ ಕಾರ್ಯಕ್ರಮ ಪ್ರಾರಂಭವಾಯಿತು. ಅನತಿ ದೂರ ಸಾಗುವಷ್ಟರಲ್ಲಿ ಎರಡು ಬೆಟ್ಟಗಳ ನಡುವೆ ಬಂದು ನಿಂತೆವು. ಮುಂಚಿನ ದಿನ ಬಲಭಾಗದ ಬೆಟ್ಟ ಏರಿದ್ದ ನಾವು ಈ ಸಲ ಎಡಭಾಗದ ಗುಡ್ಡ ಏರಬೇಕೆಂಬ ನಿಶ್ಚಯ ಮಾಡಿದೆವು. ಬಹಳಷ್ಟು ಜನ ಆಗಲೇ ಬೆಟ್ಟದ ತಪ್ಪಲನ್ನು ಏರುತ್ತಿದ್ದರು. ಮಬ್ಬುಗತ್ತಲ್ಲಿ ದಾರಿಯೇ ಕಾಣಸುತ್ತಿರಲಿಲ್ಲ. ನಾನು, ಅಜಯ್ ಮುಂದೆ ಹೋದರೆ, ಉಳಿದವರು ಮೊದಲು ಬರುವ ಧೈರ್ಯ ತೋರಲಿಲ್ಲ. ಒಬ್ಬನೇ ಒಬ್ಬ ಹೋಗುವಂಥ ಬೆಟ್ಟದ ಬುಡವನ್ನು ಬಳಸಿ ಸುತ್ತುಹಾಕಿದ ಕಿರು ಕಾಲುದಾರಿ, ಬಲಭಾಗದಲ್ಲಿ ಆ ಕತ್ತಲೆಯಲ್ಲಿ ಭಯಾನಕ ಇಳಿಜಾರಿದೆ ಎಂದು ಗೊತ್ತಾಗಿತ್ತೇ ವಿನಃ ಆ ಪ್ರಪಾತದ ಆಳ ಗೋಚರಿಸುತ್ತಿರಲಿಲ್ಲ. ಮುಂದೆ ಹೋಗುತ್ತಿದ್ದಂತೆ ದಾರಿ ಮತ್ತೂ ಕಿರಿದಾಗಿ, ಕೊನೆಗೆ ದಾರಿಯೇ ಕಾಣದಾಗಿ ಹೋಯಿತು. ನಮ್ಮ ಬಲಭಾಗದಲ್ಲಿ ಇಳಿಜಾರಿನ ದಿಕ್ಕಿಗೆ ದೃಷ್ಟಿ ಹಾಯಿಸಿದಾಗ ಸಣ್ಣದಾಗಿ ಕೆಂಬಣ್ಣ ಗೋಚರಿಸಿದಾಗ ಅದು ಮೂಡಣ ಎಂಬುದಂತೂ ಖಚಿತವಾಯ್ತು. ಸರಿ ಏನಾದರಾಗಲಿ ಎಂದು ಬೆಟ್ಟದ ತುದಿಗೆ ಸಿಕ್ಕ ಸಿಕ್ಕ ಹುಲ್ಲು, ಗಿಡಗಳ ಬುಡ ಹಿಡಿದು ಮೇಲೇರಿದೆವು. ನಾನು ಮತ್ತು ಅಜಯ್ ಹೋದಾಗ ಆಗಿನ್ನೂ ಮಬ್ಬುಗತ್ತಲು. ಬಲಭಾಗದ ಮತ್ತೊಂದು ಗುಡ್ಡದತ್ತ ನೋಡಿದರೆ, ಬೆಳಕಿನ ಚೀಲ ಹೊತ್ತ ಇರುವೆಗಳ ಸಾಲು ಬೆಟ್ಟವೇರುತ್ತಿರುವಂತೆ ಕಂಡಿತು. ಆ ಕತ್ತಲೆಯಲ್ಲಿ ಪ್ರವಾಸಿಗರು ಬೆಟ್ಟ ಹತ್ತುತ್ತಿರುವ ದೃಶ್ಯ ಅದು. ಮತ್ತರ್ಧ ಗಂಟೆಯಲ್ಲಿ ನಂದು, ವಿನಾಯಕ ಮತ್ತು ಕಾಂತು ಕೂಡ ಯಾವುದೋ ಬೇರೆ ದಾರಿಯಲ್ಲಿ ನಮ್ಮನ್ನು ಬಂದು ಸೇರಿಕೊಂಡರು. ಸ್ವಲ್ಪ ಹೊತ್ತಿನಲ್ಲಿ ಬೆಳಕು ಹರಿಯತೊಡಗಿತು. ಆ ಚಳಿಯಲ್ಲಿ, ತಂಪು ಗಾಳಿಯಲ್ಲಿ ನಡುಗುತ್ತ, ರವಿಯುದಯದ ಆ ಕ್ಷಣಕ್ಕಾಗಿ ಕಾಯುತ್ತಿದ್ದೆವು. ಸುಮಾರು 6.30 ರ ವರೆಗೆ ಬೆಳಕು ಹೆಚ್ಚಾಗುತ್ತಾ ಹೋಯಿತೇ ವಿನಃ ರವಿಯ ಸುಳಿವೇ ಇರಲಿಲ್ಲ. ಬಹುಶಃ ಮೋಡ ಕವಿದಿದೆಯೇನೋ ಎಂದು ಭಾವಿಸಿ ನಮ್ಮ ಅದೃಷ್ಟಕ್ಕೆ ಸೂರ್ಯೋದಯದ ರಸಾನುಭವ ಆಗುವುದಿಲ್ಲ ಎಂದೇ ಎಣಿಸಿದೆವು. ಮತ್ತರ್ಧ ಗಂಟೆಗೆ ಒಮ್ಮೆಲೆ ರವಿ ತನ್ನ ಕೆಂಪು ತಲೆಯನ್ನು ಹೊರಚಾಚಿದ. ಅಜಯ್ ಟ್ರೈಪೊಡ್ ಕೂರಿಸಿ ತಯಾರಾದ. ಕೆಲವೇ ಕ್ಷಣದಲ್ಲಿ ಕೆಂಪು ಕಿತ್ತಲೆ ಹಣ್ಣಿನಾಕಾರದ ರವಿ ಉದಯಿಸಿದ. ಎಳೆಬಿಸಿಲನ್ನು ಮೈಮೇಲೆ ಎರಚಿದ. ಸುತ್ತಲಿನ ಬೆಟ್ಟಗುಡ್ಡಗಳು ಆ ಎಳೆಬಿಸಿಲಿಗೆ ಅಪರೂಪದ ವರ್ಣದಲ್ಲಿ ಕಂಗೊಳಿಸತೊಡಗಿದವು. ಗಿಡಗಂಟಿಗಳು ಮೂಡಣದ ಉದಯರವಿಯ ಕಿರಣಗಳಿಗೆ, ಬೀಸುವ ತಂಗಾಳಿಗೆ ತಲೆದೂಗಿ ಸೂರ್ಯನನ್ನು ಸ್ವಾಗತಿಸಿದವು. ರವಿ ಮೇಲೇರಿದಂತೆ ತನ್ನ ಬಣ್ಣವನ್ನು ಹಂತಹಂತವಾಗಿ ಬದಲಾಯಿಸುತ್ತಾ, ಕೊನೆಗೆ ಪ್ರಖರವಾದ. ಪೂರ್ವದ ಉದ್ದಕ್ಕೂ ಕೆಂಪು ನೀರಿನ ನದಿ ಹರಿಯುತ್ತಿರುವಂತೆ ಕಂಡ ಆ ದೃಶ್ಯವನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.
ಮಂಜಿನ ಮುಸುಕನ್ನು ಸರಿಸಿ ಮೈದೋರುತ್ತಿರುವ ರವಿ
ಬೆಳಗಿನ ಚಳಿಯಲ್ಲಿ ಬೆಟ್ಟಗಳ ಸಾಲುಗಳು
8 ಗಂಟೆಗೆ ಮರಳಿ ಭಟ್ರ ಮನೆಗೆ ಬಂದು ಚಹ ಸೇವನೆ ನಂತರ ಬೆಟ್ಟ ಇಳಿಯುವ ಕೆಲಸ ನೆನೆಸಿಕೊಂಡೇ ನಮಗೆ ಭಯ ಶುರುವಾಗಿತ್ತು. 9 ಗಂಟೆಗೆ ಮೂರು ಬೈಕ್ ಬೆಟ್ಟ ಇಳಿಯತೊಡಗಿತು. ಒಂದೇ ಹಂತದಲ್ಲಿ ಆ ದಾರಿಯನ್ನು ಕ್ರಮಿಸಲು ಸಾಧ್ಯವಿಲ್ಲವೆಂಬ ಅಜಯ್‍ನ ಅಭಿಪ್ರಾಯವಂತೂ ಸುಳ್ಳಲ್ಲ. ಅಲ್ಲಲ್ಲಿ ನಿಂತು ಸಾವರಿಸಿಕೊಂಡು ಹಂತಹಂತವಾಗಿ ಪ್ರಯಾಣಿಸಬೇಕಾಗಿದ್ದು ಅನಿವಾರ್ಯ. ಕೆಲವು ಕಡೆ ಬೈಕ್ ಜಾರುತ್ತಿತ್ತು. ದೊಡ್ಡ ದೊಡ್ಡ ಕಲ್ಲುಗಳಂತೂ ಬೈಕ್‍ನ ಸಮತೋಲನವನ್ನೇ ತಪ್ಪಿಸುತ್ತಿದ್ದವು. ಎದುರಿಗೆ ಧುತ್ತನೆ ಬರುವ ಜೀಪ್‍ಗಳ ನಡುವೆ ಬೈಕ್ ಓಡಿಸುವುದು ಸಾಹಸವೇ ಸರಿ. ಅಂತೂ ಇಂತೂ ಕೊಡಚಾದ್ರಿಯ ದಾರಿ ಮುಗಿಸಿ ಕಟ್ಟಿನಹೊಳೆಗೆ ಬಂದಾಗ 11.30 ಗಂಟೆ. ಅಲ್ಲೇ ವಿರಾಮ ನೀಡಿ ತಿಂಡಿ ತಿಂದು ಸಿರಸಿಯ ದಾರಿ ಹಿಡಿದೆವು.

ಒಟ್ಟಿನಲ್ಲಿ ನಮ್ಮ ಕೊಡಚಾದ್ರಿ ಪ್ರವಾಸ ಮುಗಿಸಿದೆವು. ಹೋಗುವುದಕ್ಕೆ ಮುಂಚೆ ಅಲ್ಲಿನ ವಸತಿ ವ್ಯವಸ್ಥೆ ಮಾಡಿಕೊಳ್ಳದಿದ್ದರೂ ಭಟ್ರ ಮನೆಯಲ್ಲಿ ಒಳ್ಳೆಯ ಆತಿಥ್ಯ ಒದಗಿತು. ಆ ಕಚ್ಚಾ ರಸ್ತೆಯಲ್ಲೂ ನಮ್ಮ ಬೈಕ್‍ಗಳು ಎಲ್ಲೂ ಕೈಕೊಡದೇ ಸುಸೂತ್ರವಾಗಿ ನಮ್ಮನ್ನೆಲ್ಲಾ ಒಯ್ದು ಕರೆತಂದಿದ್ದು ಅದೃಷ್ಟವೇ ಸರಿ. ಬೈಕ್ ಚಾಲಕರೂ ಒಳ್ಳೇ ಧೈರ್ಯದಿಂದಲೇ ಸಾಗಿದ್ದು, ಸಾಯಂಕಾಲ ಮತ್ತು ಬೆಳ್ಳಂಬೆಳಿಗ್ಗೆ ಯಾವ ಸಾಹಸಕ್ಕಾದರೂ ಎಲ್ಲರೂ ತಯಾರಾಗೇ ಬಂದಿದ್ದೂ ಸಹ ನಮ್ಮ ಪ್ರವಾಸದ ಯಶಸ್ಸಿಗೆ ಕೈಗೂಡಿಸಿದವು. ಇವೆಲ್ಲದರ ಜೊತೆ ದೈವಾನುಗ್ರಹ, ದೇವರ ದಯದಿಂದ ಕೊಡಚಾದ್ರಿಯ ಅಗ್ರಕ್ಕೆ ತಲುಪಿ ಎರಡು ದಿನಗಳ ಕಾಲ ಅಲ್ಲಿನ ಪ್ರಕೃತಿಯ ಸೊಬಗನ್ನು ಸವಿದು ನಮ್ಮ ನಮ್ಮ ಕಾರ್ಯಕ್ಷೇತ್ರಕ್ಕೆ ಯಶಸ್ವಿಯಾಗಿ ಹಿಂತಿರುಗಿದೆವು.

Tuesday, 22 April 2014

(ನಿ)ವೇದನೆ



ಎದೆಯ ಬಾನಂಗಳದಿ
ಶರದ್ ಋತು
ಪೂರ್ಣ ಚಂದಿರನ
ಕಾಂತಿಗೆ ಮಿಗಿಲೆನಿಪ
ನನ್ನೊಲವಿನ ತಾರೆ

ನನ್ನೆದಯ ಬಡಿತದ
ತಾಳದ ಲಯಕೆ
ಸಮನಾಗಿರುವ
ನಿನ್ನ ಹೆಜ್ಜೆಯ
ಗೆಜ್ಜೆ ಸದ್ದಿನ ನಾದ
ಮರೆಯಲಾರೆ

ಬಾಗಿದ ಕರಿಹುಬ್ಬಿನ
ಕಿರುಕೊಂಕಿದ ಬಿಲ್ಲಿಂದ
ನಿನ್ನ ಕುಡಿನೋಟದ
ಮಾರಶರ ಬರಲು
ಸೈರಿಸಲಾರೆ

ಮದನ ಮಂಟಪದಿ
ಶೃಂಗಾರ ಶಯ್ಯೆಯಲಿ
ಉರಿವ ವಿರಹ ಜ್ವಾಲೆ
ಸುಡುವ ದೇಹ ಹೊತ್ತು
ಉಳಿಯಲಾರೆ

ಹೊರಗೆ ಹಾರುವ
ಪಾರಿವಾಳದ ತೆರದಿ
ಸುಳಿಯದಿರು ಗೆಳತಿ
ಎದೆಯ ಗೂಡನು
ನೀ ಹೊಕ್ಕದಿರೆ
ಬದುಕಲಾರೆ