Search This Blog

Tuesday, 29 September 2015

ನಿರಂತರ

ಏಕೆ ಹೀಗೆ ಆಡುತಿವೆ
ಕನವರಿಸುವ ಕನಸುಗಳು|
ನೆನೆದ ಮನವ ಕಾಡುತಿವೆ
ನೆಪ ಮಾತ್ರಕೆ ನೆನಪುಗಳು||

ಕಡಲ ತಡಿಯ ಮರಳ
ಗೂಡಿನಂತೆ ಕಡೆದ ಕನಸಿವೆ
ತಡಿಗೆ ಬಡಿವ ಅಲೆಗಳು
ಉಸುಕ ಗೂಡ ಹೊಸಕಿವೆ||

ಮಡುವಿನಲ್ಲಿ ನಿಂತ ನೀರು
ನೆನಪ ನೆನಪು ಮಾಡಿವೆ
ಸುತ್ತ ಸಿಡಿವ ಶಿಲೆಗಳು
ನೆನಪ ಕದಡಿ ಅಳಿಸಿವೆ||

ನೀರಲೆಗಳ ಹೊಯ್ದಾಟ
ಮನವ ಕಲಕಿನ ಕಲ್ಲಿನಾಟ
ಯಾರು ಬಲ್ಲರು ಯಾರ ಬಾಳನು
ಇದು ಬರೀ ವಿಧಿಯಾಟ||

ಮಂಜು ಮುಸುಕಿದ ದಾರಿ
ನಡೆಯಲಾಗದು ಮಾರುದೂರ
ಕನಸು ನೆನಪು ಒಟ್ಟು ಕೂಡಿರೆ
ಬದುಕ ಬಯಕೆ ನಿರಂತರ||

Wednesday, 9 September 2015

ಕವಿತೆ-ಒರತೆ

ದುಃಖತಪ್ತ ಹೃದಯಕೆ
ತಂಪೆರೆವ ಸಾಧನ|
ಸ್ನೇಹವೆಂಬ ಒಂದು ಹನಿ
ಸಿಹಿನೀರಿನ ಸಿಂಚನ||

ಬಯಸಿದ್ದು ಸ್ನೇಹದ 
ಸಿಹಿ ನೀರು|
ದೊರಕಿದ್ದು ಉಕ್ಕಿಬಹ
ಉಪ್ಪು ನೀರು||

ಸ್ನೇಹಭಾವದಿ ಕುಳಿತು
ಬರೆಯುತಿರೆ ಕವಿತೆ|
ಮಂಜಾದ ನಯನಗಳು
ಉಪ್ಪುನೀರಿನ ಒರತೆ||

ಗೆಳೆತನದ ಬಯಕೆಯಲಿ
ಮುಂದೆ ಕೈಚಾಚಿರೆ|
ಒಡ್ಡಿದ ಕರಗಳಿಗೆ
ಗಾಯವಾಗದ ಬರೆ||

ರವಿ-ಶಶಿಯರು ಮಂಕಾದರೂ
ಪೃಥ್ವಿಗೆ ಪ್ರಳಯವಾದರೂ|
ಹಸನಾಗಿರಲಿ ತವ ಜೀವನ
ಹರಸುವ ಹಾರೈಕೆ ಈ ಕವನ||

Tuesday, 8 September 2015

ಧಾರ್ಮಿಕತೆಯಲ್ಲಿ ವೈಜ್ಞಾನಿಕತೆಯ ತಳಕು!!?

       ಭೂಗ್ರಹದಲ್ಲಿ ಶತಶತಮಾನಗಳಿಂದ ಬದುಕುತ್ತಿರುವ ಮನುಷ್ಯನೆಂಬ ಜೀವಿ, ಇಂದು ಭೂಮಿಯ ವ್ಯಾಪ್ತಿಯನ್ನೂ ಮೀರಿ ಹೊರಟಿದ್ದಾನೆ. ವಿಜ್ಞಾನ ಸೌರವ್ಯೂಹದ ಎಲ್ಲೆಯನ್ನೂ ದಾಟಿ ಮುಂದರಿದಿದೆ. ಆದರೆ ವಿಜ್ಙಾನದ ಹುಮ್ಮಸ್ಸಿನಲ್ಲಿ ತಮ್ಮ ಪೂರ್ವವೃತ್ತಾಂತವೆಂಬುದು ಮರೆಯಾಗಿ ಹೋಗುತ್ತಿದೆ. ವಿಜ್ಞಾನದ ಅಪರಿಮಿತ ಬೆಳವಣಿಗೆ, ಅದೆಷ್ಟೋ ಶತಮಾನಗಳಿಂದ ಅವಿಚ್ಛಿನ್ನವಾಗಿ ರೂಢಿಸಿಕೊಂಡು ಬಂದ ಜೀವನಕ್ರಮವನ್ನೇ ಬದಲಾಯಿಸುವ ಪ್ರಕ್ರಿಯೆಗೆ ಮುಂದಾಗುತ್ತಿದೆ. ಪ್ರತಿ ದಶಕದಲ್ಲೂ ಮಾನವನ ಜೀವನ ಸುಲಭವಾಗುತ್ತಾ ಸಾಗುತ್ತಿದೆ. ಆದರೆ ಜೊತೆಜೊತೆಗೆ ಹುಟ್ಟುತ್ತಿರುವ ಹೊಸ ಸಮಸ್ಯೆಗಳ ಬಗ್ಗೆ ಜನರು ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ. ದಿನೇ ದಿನೇ ಮಾನವ ಸಹಜ ಗುಣಗಳು ಸಹ ಮಾಪರ್ಾಡು ಹೊಂದುತ್ತಿದೆ. ಹೊಸ ರೋಗ ರುಜಿನಗಳು ತಲೆ ಎತ್ತುತ್ತಿವೆ. ಮಾನಸಿಕ ಶಾಂತಿ ಕಡಿಮೆಯಾಗಹತ್ತಿದೆ. ಭೌದ್ಧಿಕ ಶಕ್ತಿ ಕುಂಠಿತವಾಗುತ್ತಿದೆ. ಸಾಮಾಜಿಕ ಜೀವನವೆಂಬುದು ಕೇವಲ ಹೆಸರಿಗಷ್ಟೇ ಸೀಮಿತವಾಗಿ, ವಿಚಾರಗಳು ಸಂಕುಚಿತಗೊಳ್ಳುತ್ತಿವೆ. ಇವೆಲ್ಲಾ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವುದರ ಜೊತೆಜೊತೆಗೆ, ಮುಂದಿನ ಪೀಳಿಗೆಯಲ್ಲಾಗಬಹುದಾದಂತ ದುರಂತಗಳ ಮುನ್ಸೂಚನೆಯನ್ನು ಸದ್ದಿಲ್ಲದೇ ನೀಡುತ್ತಿರುವಂತೆ ಭಾಸವಾಗುತ್ತಿದೆ. ಇನ್ನೂ ಈ ವಿಷಯವಾಗಿ ಗಂಭೀರವಾಗಿ ವಿಚಾರಿಸದಿದ್ದರೆ, ಮುಂದೆ ತಿರುಗಿ ನೋಡುವುದಷ್ಟಕ್ಕೆ ನಮ್ಮನ್ನು ಸೀಮಿತಗೊಳಿಸಬೇಕಾದೀತು.

       ಪ್ರಸ್ತುತದಲ್ಲಿ ವಿಜ್ಞಾನದ ಸೋಗಿನಲ್ಲಿ, ಧಾರ್ಮಿಕತೆಯನ್ನು ಅಲ್ಲಗಳೆಯುವ ಗುಂಪೇ ಹುಟ್ಟಿಕೊಂಡಿದೆ. ಧಾರ್ಮಿಕ ಆಚರಣೆಗಳನ್ನು ಟೀಕಿಸುವ, ಅದನ್ನು ಮುಗಿಸುವ ಹುನ್ನಾರ ನಡೆದಿದೆ. ಧರ್ಮವೆಂಬುದು ಸೀಮಿತವಾದ ಜನಾಂಗಕ್ಕಷ್ಟೇ ಒತ್ತು ಕೊಡುವ, ಅನುಕೂಲವಾದಿಗಳು ಹುಟ್ಟುಹಾಕಿದ ಪದ್ಧತಿಯೆಂಬಂತೆ ಬಿಂಬಿಸಲಾಗುತ್ತಿದೆ. ಆದರೆ ನೈಜತೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಧರ್ಮವೆಂಬುದು ಮಾನವನ ಸರ್ವತೋಮುಖ ಅಭಿವೃದ್ಧಿಗೆ ಅನಿವಾರ್ಯವಾದ ಜೀವನಕ್ರಮವೆಂದು ಸ್ಪಷ್ಟಪಡುತ್ತದೆ. ಧರ್ಮ ಮತ್ತು ಧಾರ್ಮಿಕ ಆಚರಣೆಗಳು ಅನೇಕ ಸಾಧು ಸಂತರ ನಿರಂತರ ಸಂಶೋಧನೆಯ ಅಂತಿಮ ಫಲಿತಾಂಶವೇ ಹೊರತು ಮತ್ತೇನಲ್ಲ. ಅವರ ಸಂಶೋಧನೆಯ ವಿಧಾನಗಳು ಭಿನ್ನವಾಗಿರಬಹುದು, ಆದರೆ ಅವುಗಳಿಂದ ಬಂದ ಫಲಿತಾಂಶ ಏಕರೂಪದ್ದು. ಬಹಳಷ್ಟು ಧರ್ಮಗಳನ್ನು ಕೂಲಂಕುಶವಾಗಿ ಗಮನಿಸಿದರೆ, ಧ್ಯಾನ ಅವಿಭಾಜ್ಯ ಅಂಗವಾಗಿ ಹೊರಹೊಮ್ಮುತ್ತದೆ. ಪೂರ್ವಜರ ಅಭಿಪ್ರಾಯದಂತೆ, ಧ್ಯಾನವೆಂದರೆ ಸಕಲ ದಿಕ್ಕುಗಳಿಂದಲೂ ಬರುತ್ತಿರುವ ಶಕ್ತಿಯನ್ನು ಕೇಂದ್ರೀಕರಿಸುವ ಸಾಧನ. ಆ ಶಕ್ತಿಯೇ ಮಾನವನ ಭೌತಿಕ, ಮಾನಸಿಕ ಮತ್ತು ಭೌದ್ಧಿಕ ಆರೋಗ್ಯಕ್ಕೆ ಸೋಪಾನ. ಅದೇ ರೀತಿಯಲ್ಲಿ ಬಹಳಷ್ಟು ಆಚರಣೆಗಳು ವಿವಿಧ ಧರ್ಮಗಳಲ್ಲಿ ಸಮಾನ ಸ್ಥಾನವನ್ನು ಪಡೆದುಕೊಂಡಿವೆ. ಧ್ಯಾನವೊಂದು ಉದಾಹರಣೆ ಅಷ್ಟೆ.

       ಧಾರ್ಮಿಕ ಆಚರಣೆಗಳು ಸುಖಾಸುಮ್ಮನೆ ರೂಢಿಗೆ ಬಂದದ್ದಲ್ಲ. ಅದೆಷ್ಟೋ ಸಂತರ ನಿರಂತರ ಸಂಶೋಧನೆಯಿಂದ ಉಳಿದವರಿಗೆ ಭೋಧಿನಲ್ಪಟ್ಟದ್ದು. ಅವರು ಆಚರಣೆಗಳನ್ನು ಹೇಳಿಕೊಟ್ಟರೇ ವಿನಃ ಅವುಗಳ ಹಿಂದಿರುವ ಕಾರಣಗಳನ್ನು ಸಾಮಾನ್ಯರಿಗೆ ತಿಳಿಯಪಡಿಸಿಲ್ಲ. ಅವೆಲ್ಲಾ ಪ್ರತಿಯೊಬ್ಬರ ಉನ್ನತಿಗೆ ಎಡೆಮಾಡಿಕೊಡುತ್ತವೆ ಎಂಬುದನ್ನು ಅವರು ಸಮರ್ಥಿಸಿದರು. ಅವುಗಳಿಂದ ಆಗಬಹುದಾದ ಒಳ್ಳೆಯ ಪರಿಣಾಮಗಳನ್ನು ತಿಳಿಯಪಡಿಸಿದರು.  ಆದರೆ ಕಾರಣಗಳನ್ನು ಸಾಮಾನ್ಯರಿಗೆ ತಿಳಿಸಿದರೂ ಅದು ಅವರಿಗೆ ಅನವಶ್ಯಕವೆಂದು ಭಾವಿಸಿದರೋ ಏನೋ. ಉದಾಹರಣೆಗೆ, ಒಬ್ಬ ಅವಿದ್ಯಾವಂತನಿಗೆ ವಿದ್ಯುತ್ ಪ್ರವಹಿಸುತ್ತಿರುವ ತಂತಿಯನ್ನು ಮುಟ್ಟಬಾರದು ಎಂದು ಸಲಹೆ ಕೊಡುಬಹುದು, ಅದೇ ಅವನಿಗೆ ಅದರ ಹಿಂದಿರುವ ಕಾರಣವನ್ನು ವಿವರಿಸಿ ಅರ್ಥಮಾಡಿಸುವುದು ಆ ಕ್ಷಣಕ್ಕೆ ಸುಲಭಸಾಧ್ಯವಲ್ಲ. ಅದಕ್ಕಾಗಿಯೇ ನಮ್ಮ ಪೂರ್ವಿಕರು ಕೇವಲ ಆಚರಣೆಗಳನ್ನಷ್ಟೇ ಭೋಧಿಸಿದ್ದಿರಬಹುದು. ಕಾರಣವನ್ನು ತಿಳಿಯುವ ಗೋಜಿಗೆ ಹೋಗದೇ ಕ್ರಮೇಣ ಆ ಆಚರಣೆಗಳು ಒಂದು ಸಂತತಿಯಿಂದ ಮುಂದಿನ ಸಂತತಿಗೆ ಮುಂದುವರಿದಂತೆ ತೋರುತ್ತದೆ. ಆಚರಣೆಗಳ ಹಿಂದಿನ ಕಾರಣಗಳ ಸಮರ್ಪಕ ವಿವರಣೆ ಇಲ್ಲದಿರುವುದು, ಧಾರ್ಮಿಕ ಆಚರಣೆಗಳು ಮೂಢನಂಬಿಕೆಗಳೆಂದು ಟೀಕಿಸುವ ಸ್ಥಿತಿ ನಿರ್ಮಾಣವಾಗಲು ಮೂಲಕಾರಣವಾಗಿದೆ ಎಂದು ನನ್ನ ಭಾವನೆ.  

       ಈ ನಿಟ್ಟಿನಲ್ಲಿ, ಕೆಲವು ಸರಳ ಧಾರ್ಮಿಕ ಆಚರಣೆಗಳ ಹಿಂದಿರಬಹುದಾದಂತ ವೈಜ್ಞಾನಿಕ ಮರ್ಮವನ್ನು ಚರ್ಚಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ. ಆಚರಣೆಗಳು ಕೇವಲ ಕ್ರಿಯೆಗಳಲ್ಲ, ಅವು ಜೀವನ ಕ್ರಮಗಳು. ಇಂಥ ಜೀವನಕ್ರಮದಿಂದ ಸರ್ವೋನ್ನತಿ ಸಾಧ್ಯ ಎಂಬುದೇ ಅದರ ಹಿಂದಿರುವ ರಹಸ್ಯರೂಪಿ ಸ್ವಾರಸ್ಯ. ಆ ರಹಸ್ಯಗಳನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ಶೋಧಿಸಿದರೆ, ಅವು ಒಂದೊಂದಾಗಿ ಮೈದೋರತೊಡಗುತ್ತವೆ. ನನಗನ್ನಿಸಿದಂತೆ, ಪ್ರತಿಯೊಂದು ಆಚರಣೆಗಳಿಗೂ ಅದರದೇ ಆದ ಶಕ್ತ ಕಾರಣಗಳಿವೆ. ಅವುಗಳನ್ನು ಹುಡುಕುವ ಯತ್ನ ಯಶಸ್ಸನ್ನು ಕಾಣಬೇಕಷ್ಟೆ.

       ವೈಜ್ಞಾನಿಕತೆಯಂತೆ, ಮಾನವನ ದೇಹದಲ್ಲಿ ಕಣ್ಣು, ಕಿವಿ, ನಾಲಿಗೆ, ನಾಸಿಕ ಮತ್ತು ಚರ್ಮಗಳನ್ನು ಪಂಚ ಜ್ಞಾನೇಂದ್ರಿಯಗಳೆಂದು ಗುರುತಿಸಿದ್ದಾರೆ. ಅಂದರೆ, ಜ್ಞಾನವನ್ನು ಸ್ವೀಕರಿಸುವ ಶಕ್ತಿಯುಳ್ಳ ಅಂಗಗಳು ಎಂಬರ್ಥ. ಇವು ಶಕ್ತಿಯ ಮೂಲಸ್ವರೂಪಗಳನ್ನು ಗುರುತಿಸುವ ಮತ್ತು ಮಾಪಿಸುವ ನೈಸರ್ಗಿಕ ಸಾಧನದಂತೆ ವರ್ತಿಸುತ್ತವೆ. ನೇತ್ರಗಳು ಬೆಳಕಿನ ಶಕ್ತಿಯನ್ನು ಗುರುತಿಸಿದರೆ, ಕರ್ಣಗಳು ಶಬ್ದಶಕ್ತಿಗೆ ಸಂಬಂಧಿಸಿವೆ. ಜಿಹ್ವೆಯು ರಸಾನುಭವವನ್ನು ಪ್ರಚುರಪಡಿಸಿದರೆ, ನಾಸಿಕವು ಗಂಧವನ್ನು ಮಾರುತದ ಮೂಲಕ ಗುರುತು ಹಚ್ಚುತ್ತದೆ. ಚರ್ಮೇಂದ್ರಿಯವು ವಾಯುಶಕ್ತಿಯಿಂದ ಸ್ಪರ್ಶವನ್ನೂ, ಉಷ್ಣಶಕ್ತಿಯನ್ನೂ ಸಂವೇದಿಸುತ್ತದೆ. ಈ ಶಕ್ತಿಗಳೇ ಮಾನವನ ದಿನನಿತ್ಯದ ಚಲನೆ, ಕೆಲಸ ಕಾರ್ಯಗಳಿಗೆ ಅತ್ಯವಶ್ಯಕ. ಯಾವೊಂದು ಶಕ್ತಿ ಏರುಪೇರಾದರೂ ಮನುಷ್ಯ ಏಕರೂಪಿಯಾಗಿ ಜೀವಿಸಲು ಅಸಾಧ್ಯ. ಶಾಸ್ತ್ರದಲ್ಲಿ, ಪ್ರಪಂಚವು ಅಗ್ನಿ, ಜಲ, ವಾಯು, ಭೂಮಿ ಮತ್ತು ಆಕಾಶಗಳೆಂಬ ಪಂಚಮಹಾಭೂತಗಳಿಂದಾಗಿದೆ ಎಂಬುದಾಗಿ ಹೇಳಲ್ಪಟ್ಟಿದೆ. ಈ ಪಂಚಭೂತಗಳಿಗೂ, ಪಂಚೇಂದ್ರಿಯಗಳಿಗೂ ನೇರವಾದ ಸಂಬಂಧ ಕಲ್ಪಿಸಬಹುದು. ಅಗ್ನಿ (Light energy) ಬೆಳಕಿನ ಪ್ರತೀಕವಾಗಿ ನೇತ್ರಗಳಿಗೆ ದೃಶ್ಯಜ್ಞಾನವನ್ನು ನೀಡುತ್ತದೆ. ಜಲವು (Chemical energy) ನಾಲಿಗೆಗೆ ರಸಜ್ಞಾನವನ್ನು ಉಣಬಡಿಸುತ್ತದೆ. ವಾಯುವಿನ (Heat energy) ಮುಖಾಂತರ ಚರ್ಮವು ಸ್ಪರ್ಶಜ್ಞಾನವನ್ನು ಅನುಭವಿಸುತ್ತದೆ. ಕಿವಿಗಳು ಶ್ರವಣಜ್ಞಾನವನ್ನು (Sound Energy) ಸ್ವೀಕರಿಸುತ್ತವೆ. ಭೂಮಿಯು ಗಂಧದ (wind energy) ಸಂಕೇತವಾಗಿ ನಾಸಿಕಕ್ಕೆ ಸಂಬಂಧಿಸಿದೆ. ಆಕಾಶ ಈ ಎಲ್ಲ ಜ್ಞಾನಗಳ ಏಕೀಕರಣಕ್ಕೆ ಮಾಧ್ಯಮದಂತೆ (Medium of unification - ether) ವರ್ತಿಸುತ್ತದೆ, ಅಲ್ಲದೆ ಶಾಖಶಕ್ತಿಯನ್ನೂ ಸಹ ಪಸರಿಸುತ್ತದೆ. ಆಕಾಶವೆಂಬುದಿಲ್ಲದಿದ್ದರೆ, ಈ ಶಕ್ತಿಗಳ ಪ್ರಸರಣ ಕಷ್ಟಸಾಧ್ಯವಾಗಿ ಪರಿಣಮಿಸುತ್ತದೆ. ಈ ಶಕ್ತಿಗಳನ್ನು ಸಮರ್ಪಕವಾಗಿ ಸ್ವೀಕರಿಸಲು ಶಕ್ತವಾದಂತ ದೇಹದಲ್ಲಿ ಪ್ರಾಣವೆಂಬ ಶಕ್ತಿ ಕೇಂದ್ರೀಕರಣ ವ್ಯವಸ್ಥೆಯಿರುತ್ತದೆ. ಯಾವಾಗ ಈ ವ್ಯವಸ್ಥೆ ಶಿಥಿಲವಾಗುತ್ತದೆಯೋ, ಆಗ ದೇಹ ಶವವಾಗಿ ಮಾರ್ಪಟ್ಟು, ಇದೇ ಪಂಚಭೂತಗಳಲ್ಲಿ ಲೀನವಾಗುತ್ತದೆ. ಆದ್ದರಿಂದ ಧಾರ್ಮಿಕ ನಂಬಿಕೆಗಳಲ್ಲಿ ಪಂಚಭೂತಗಳನ್ನು ಉಲ್ಲೇಖಿಸಿದ್ದರೆ, ವಿಜ್ಞಾನದಲ್ಲಿ ಪಂಚೇಂದ್ರಿಯಗಳ ಬಗ್ಗೆ ವಿವರಿಸಲ್ಪಟ್ಟಿದೆ.

       ವೇದಗಳ ಪ್ರಕಾರ ಶಕ್ತಿಯೆಂಬುದು ಅನಂತ, ಅದು ಸಕಲ ದಿಕ್ಕುಗಳಿಗೂ ನಿರಂತರವಾಗಿ ಪ್ರಸರಣವಾಗುತ್ತಾ ಇರುತ್ತದೆ. ಶಕ್ತಿಯನ್ನು ನಾವು ಇಂದ್ರಿಯಗಳ ಮೂಲಕ ಹೀರಿಕೊಂಡರೆ, ಅದು ನಮ್ಮ ದೇಹದ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕಾಗಿ, ನಮ್ಮ ಪಂಚೇಂದ್ರಿಯಗಳು ಸದಾಕಾಲ ಜಾಗೃತವಾಗಿರಬೇಕು. ದೇವಾಲಯಗಳಲ್ಲಿನ ಸಂಪ್ರದಾಯಗಳನ್ನು ಸ್ವಲ್ಪ ಸೂಕ್ಷ್ಮವಾಗಿ ಗ್ರಹಿಸಿದರೆ, ಅವು ಇಂದ್ರಿಯ ಜಾಗೃತಿಗೆ ಪೂರಕವಾಗಿರುವಂತೆ ತೋರುತ್ತವೆ. ದೇವರಿಗೆ ಬೆಳಗುವ ಆರತಿ, ಕಣ್ಣುಗಳಗೆ ಶಕ್ತಿಯನ್ನು ಪೂರೈಸುತ್ತಿದ್ದರೆ, ಘಂಟಾನಾದ ಕಿವಿಯನ್ನು ಜಾಗೃತವಾಗಿಸುತ್ತವೆ. ಸುಮಪ್ರಸಾದವು ನಾಸಿಕಕ್ಕೆ ಕೆಲಸ ಕೊಡುತ್ತಾ ಸುಗಂಧದ ಆಹ್ಲಾದಕತೆಯನ್ನು ಪೂಸುತ್ತದೆ. ಜಲಭರಿತ ತೀರ್ಥ ಜಿಹ್ವೆಯ ರಸಗ್ರಹಿಕೆಯ ಶಕ್ತಿಯ ಪರೀಕ್ಷೆಯನ್ನು ಮಾಡುತ್ತದೆ. ಆರತಿಯ ಶಾಖವನ್ನು ಹತ್ತಿರದಿಂದ ಕೈಗಳಿಂದ ಸ್ವೀಕರಿಸುವ ಮುಖೇನ ಚರ್ಮವೂ ತನ್ನ ಕಾಯಕವನ್ನು ಜಾಗೃತವಾಗಿರಿಸಿಕೊಳ್ಳತ್ತದೆ. ಒಂದು ವಿಧದಲ್ಲಿ ಈ ಕ್ರಮಗಳು ಯಾವುದೇ ಸಮಯದಲ್ಲಿ, ಯಾವ ರೂಪದಲ್ಲಿ ಶಕ್ತಿಯ ಆಗಮನವಾದರೂ, ಅದನ್ನು ಕ್ಷಣದಲ್ಲೇ ಗ್ರಹಿಸಿ ಹಿಡಿದಿಟ್ಟುಕೊಳ್ಳಲು ದೇಹವನ್ನು ತಯಾರು ಮಾಡುವಲ್ಲಿ ಪೂರಕವಾದಂತೆ ಕಾಣುತ್ತವೆ. ಮುಂದಿನ ಹಂತದಲ್ಲಿ ಎಲ್ಲ ಶಕ್ತಿಗಳನ್ನೂ ಕ್ರೋಢೀಕರಿಸಿ, ದೇಹದ ಆರೋಗ್ಯವನ್ನೂ, ಮಾನಸಿಕ ಶಾಂತಿಯನ್ನೂ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರೇರಣೆಯಾಗುತ್ತವೆ.

       ಇದೇ ತೆರನಾಗಿ, ಸಕಲ ಧರ್ಮಾಚರಣೆಗಳಿಗೂ ಕಾರಣಗಳಿದ್ದಿರಲೇ ಬೇಕು. ಅವುಗಳನ್ನು ಶೋಧಿಸುವ ಕಾರ್ಯಕ್ಕೆ ಮುಂದಾಗೋಣ. ಪಾಶ್ಚಿಮಾತ್ಯರ ಪ್ರಭಾವದಲ್ಲಿ ನಿಧಾನವಾಗಿ ತೆರೆಮರೆಗೆ ಸರಿಯುತ್ತಿರುವ ಧಾರ್ಮಿಕ ವಿಧಿವಿಧಾನಗಳಿಗೆ ವೈಜ್ಞಾನಿಕ ಕಾರಣಗಳನ್ನು ಹುಡುಕಿ, ಧರ್ಮ ಇಂದಿನ ವಿಜ್ಞಾನಕ್ಕಿಂತ ಮುಂದುವರಿದ ವಿಜ್ಞಾನ ಎಂಬ ನಿಜವನ್ನು ಸಾರುವಲ್ಲಿ ಹೆಜ್ಜೆಯಿಡೋಣ.