Search This Blog

Saturday, 8 June 2013

ಮುಗಿ(ಯ)ದ ಕಥೆ

ಅಂದು ಸಂಜೆ 5 ರ ಸಮಯ. ಬೇಗನೇ ಗುಡ್ಡದ ತುದಿಗೆ ಹೋಗಬೇಕಿತ್ತು. ಎರಡು ದಿನಗಳಿಂದ ಮನಸ್ಸಿಗೇಕೋ ಸಮಾಧಾನವಿರಲಿಲ್ಲ. ಗೆಳತಿಯ ಮಧುರ ನುಡಿಗಳು ಕಿವಿಗೆ ಬಿದ್ದಿರಲಿಲ್ಲ. ಅವಳ ಸುಂದರ ನಗುಮೊಗವನ್ನು ಕಾಣದೇ ವರ್ಷಗಳೇ ಆದಂತೆ ಭಾಸವಾಗುತಿತ್ತು. ಅಂದು ಭಾನುವಾರ. ಅವಳು ಗುಡ್ಡದ ತುದಿಗೆ ಬರುವಳೆಂದು ಗೊತ್ತು. ಮನೆಯಿಂದ ಹೊರಬಿದ್ದವನೇ ಗುಡ್ಡದ ಕಡೆ ಹೆಜ್ಜೆ ಹಾಕತೊಡಗಿದೆ. ಅರ್ಧ ಗಂಟೆಯಲ್ಲಿ ಅಲ್ಲಿ ತಲುಪಿಯಾಗಿತ್ತು. ಸೂರ್ಯ ಕೆಂಪಾಗಿ ನಾಚಿದ ಗೆಳತಿಯ ವದನವನ್ನು ನೆನಪಿಸುತ್ತಿದ್ದ. ತಂಗಾಳಿ ಮುಖಕ್ಕೆ ಸೋಕಿ ಹಿತ ನೀಡುತಿತ್ತು. ಅವಳನ್ನು ನೋಡುವ ಮಾತನಾಡುವ ತವಕ ಕ್ಷಣಕ್ಷಣಕ್ಕೂ ಹೆಚ್ಚುತಿತ್ತು. ಅವಳೆಲ್ಲೇ ಇದ್ದರೂ ಕಣ್ಣು ಅನಾಯಾಸವಾಗಿ ಹುಡುಕುತ್ತಿತ್ತು.



ಸುಮಾರು ಎರಡು ವರ್ಷಗಳ ಹಿಂದಿನ ಮಾತು. ನಾವಿಬ್ಬರೂ ಬಸ್ಸಿಗಾಗಿ ಕಾಯುತ್ತ ನಿಂತಿದ್ದೆವು. ಅಕ್ಕ- ಪಕ್ಕದ ಊರು ನಮ್ಮಿಬ್ಬರದು. ಯಾಕೋ ಅಂದು ವಾಹನಗಳ ಓಡಾಟ ಕಡಿಮೆಯಿತ್ತು. ಅವಳ ಮುಖದಲ್ಲಿ ದುಗುಡವಿತ್ತು. ಬಸ್ ಸಿಗುವುದಿಲ್ಲವೇನೋ ಎಂಬ ಆತಂಕ ಎದ್ದು ಕಾಣುತಿತ್ತು. ಪದೇ ಪದೇ ಅವಳ ಕಣ್ಣುಗಳು ಕೈಗಡಿಯಾರವನ್ನು ಗಮನಿಸುತ್ತಿತ್ತು. ನನಗರಿವಿಲ್ಲದಂತೆ ನಾನು ಅವಳ ಸನಿಹವಿದ್ದೆ, ಮಾತಿಗೆ ಮನಮಾಡಿದೆ. ಬಸ್ ಬರುವ ಸೂಚನೆ ಕಾಣುತ್ತಿಲ್ಲ, ಸ್ವಲ್ಪ ದೂರ ನಡೆದರೆ ಬೇರೆ ವಾಹನ ಸಿಗಬಹುದು, ನಾನೂ ಮನೆಗೆ ಹೊರಟಿದ್ದೇನೆ ಎಂದೆ. ತಲೆ ಅಲ್ಲಾಡಿಸಿ ನನ್ನ ಹಿಂಬಾಲಿಸಿದಳು. ಇಬ್ಬರೂ ಒಂದು ಟೆಂಪೊ ಹಿಡಿದು ಊರಿಗೆ ಬಂದಿದ್ದಾಯ್ತು. ರಾತ್ರಿ ಎಂಟು ಗಂಟೆ. ಅವಳನ್ನು ಕರೆದುಕೊಂಡು ಹೋಗಲು ಅವಳ ಅಪ್ಪ ಬಂದಿದ್ದ. ಒಂದೆರಡು ಮಾತಾಡಿ ನಮ್ಮ ನಮ್ಮ ದಾರಿಹಿಡಿದೆವು. ಮನೆ ತಲುಪುವಷ್ಟರಲ್ಲಿ ಮೊಬೈಲ್ ಸದ್ದು ಮಾಡಿತು. "HAVE YOU REACHED HOME SAFELY? GOOD NIGHT".



ಅಂದಿನಿಂದ ಇಂದಿನವರೆಗೂ ಅದೆಷ್ಟೋ ಸಂದೇಶಗಳು ನಮ್ಮ ಮೊಬೈಲ್ಗಳಲ್ಲಿ ಹರಿದಾಡಿವೆ. ನಾವು CHAT ಮಾಡದ ದಿನವೇ ಇಲ್ಲ ಎಂಬಷ್ಟರ ಮಟ್ಟಿಗೆ ನಮ್ಮನ್ನು ಹತ್ತಿರವಾಗಿಸಿವೆ. ಅವಳ ಜೊತೆ ಹೆಜ್ಜೆ ಹಾಕಿದ ಮಧುರ ಕ್ಷಣಗಳು ಅನನ್ಯ. ಜೊತೆಗೂಡಿದ ಮಾತುಗಳು ಅಮೃತ. ಜೊತೆ ಬದುಕುವ ಯೋಚನೆಯು ಬಂದಾಗಿತ್ತು. ಮನದ ಕಲ್ಪನೆಗಳಿಗೆ ಮೇರೆಗಳಿಲ್ಲ. ಆದರೆ ಕೊನೆಗೂ ಅವಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲಾಗಲಿಲ್ಲವಲ್ಲಾ ಎಂಬ ನೋವು ಮಾತ್ರ ಇಂದಿಗೂ ಸತ್ಯವಾಗಿದೆ.

 



   
ಬೆಟ್ಟದ ತುದಿ ಕೈಬೀಸಿ ಕರೆಯುತ್ತಿತ್ತು. ಸುತ್ತಲೂ ಮನ ತಣಿಸುವ ನಿಸರ್ಗದ ಸುಂದರ ನಯನ ಮನೋಹರ ದೃಶ್ಯ. ಇಂಥ ಅದ್ಭುತ ಕ್ಷಣದಲ್ಲಿ ಅವಳನ್ನು ನೋಡಲು, ಮಾತನಾಡಲು ನಾನು ಕಾತರನಾಗಿದ್ದೆ. ಥಟ್ಟನೆ ಅಣತಿ ದೂರದಲ್ಲಿ ಬಳೆ ಕಣಗುಟ್ಟಿತು. ಗೆಜ್ಜೆ ಸದ್ದು ಕಿವಿ ನಿಮಿರಿಸಿತು. ತಿರುಗಿ ನೋಡಿದರೆ ಅಲ್ಲಿ ಮೋಹಕ ನಗೆ ಬೀರುತ್ತಾ ರವಿಯ ಹೊಂಬಣ್ಣದಲಿ ಮಿಂದು ಬರುತ್ತಿರುವ ಚೆಲುವೆ.

"ನಿನಗಾಗಿಯೇ ಕಾಯ್ತಾ ಇದ್ದೆ".

ಅವಳಂದಳು "ನನಗೆ ಗೊತ್ತು".

"ಮತ್ತೇನೆಲ್ಲಾ ಗೊತ್ತು".

"ನೀನು ನನ್ನ ಇಷ್ಟಪಡುವ ವಿಷಯ".

ಅನಿರೀಕ್ಷಿತ ಉತ್ತರಕ್ಕೆ ನಾನ್ನ ಮಾತೇ ಹೊರಡದಾಯಿತು. ನಾನು ಅವಳನ್ನು ಇಷ್ಟಪಡುತ್ತೇನೆಂದು ಯಾವತ್ತೂ ಯಾವ ರೀತಿಯಲ್ಲೂ ವ್ಯಕ್ತಪಡಿಸಿರಲಿಲ್ಲ. ಹೆಣ್ಣು ಭಾವನೆಗಳ ಪೋಷಕಿ, ಅಂತವಳಿಗೆ ಅದನ್ನು ಗ್ರಹಿಸಲಾಗದೇ?

ವಿಚಾರ ಮಾಡುತ್ತಿರುವಂತೆಯೇ "ನನ್ನನ್ನು ನಿನ್ನ ಲೈಫ್ ಪಾರ್ಟನರ್ ಮಾಡ್ಕೋತೀಯಾ?" ಅವಳ ಮಧುರ ಧ್ವನಿ.

ನಾನು ಮೂಕನಾಗಿದ್ದೆ. ಅವಳು ನನ್ನನ್ನೇ ದಿಟ್ಟಿಸುತ್ತಿದ್ದಳು. ಎರಡು ಹೆಜ್ಜೆ ಮುಂದಿಟ್ಟು ಅವಳ ಮೃದುವಾದ ಕೈ ಹಿಡಿದು ಹೌದೆಂಬಂತೆ ತಲೆಯಾಡಿಸಿದೆ. ಬಾಯಿಂದ ಶಬ್ದವೇ ಹೊರಡುತ್ತಿಲ್ಲ. ಪ್ರಯತ್ನ ಮಾಡಿ ಅವಳಿಗೆ ನನ್ನ ಮನಸ್ಸಿನ ಇಂಚಿಂಚನ್ನೂ ಹೇಳಿಬಿಡಬೇಕು ಎನ್ನುವಷ್ಟರಲ್ಲಿ, ತಂಪೆರಚಿತು. ಸುತ್ತಲೂ ಪರಾಮರ್ಷಿಸಿದರೆ ನರಪಿಳ್ಳೆಯೂ ಇಲ್ಲ. ಸಣ್ಣ ನಸುನಗುವೊಂದು ಮುಖದಲ್ಲಿ ಮಿಂಚಿ ಮರೆಯಾಯಿತು. ಮತ್ತೆ ಅವಳ ದಾರಿ ಕಾಯುತ್ತ ಹುಚ್ಚು ಮನಸು ತನ್ನದೇ ದಿಕ್ಕಿನಲ್ಲಿ ಕನಸಿನ ಗೋಪುರ ಕಟ್ಟುತ್ತ ತೇಲಿಸಿ ಮತ್ತೆ ನೈಜತೆಯ ದರ್ಶನ ಮಾಡಿಸುತ್ತಾ ಆಟವಾಡುತಿತ್ತು.

ರವಿ ಆಗಸದ ಅಂಚಿನಲ್ಲಿ ನಿರ್ಗಮನದ ಸಿದ್ಧತೆ ಮಾಡಿಕೊಳ್ಳತೊಡಗಿದ್ದ. ಅವಳನ್ನು ನೋಡದೇ ಅವನಿಗೂ ನಿರಾಶೆ ಕಾಡುತ್ತಿರಬೇಕು. ಮತ್ತೆ ಮತ್ತೆ ತನ್ನ ನೇತ್ರಗಳನ್ನು ಚಾಲಿಸುತ್ತಿದ್ದ. ಅವನೊಂದಿಗೆ ನಾನೂ ಸಹ ಮನೆಯ ದಾರಿ ಹಿಡಿಯಬೇಕು ಎಂಬಷ್ಟರಲ್ಲಿ, ಕೂಗಳತೆಯ ದೂರದಲ್ಲಿ ಅವಳ ಮೋಹಕ ನಗು. ಓಡೋಡಿ ಬರುತ್ತಿದ್ದಾಳೆ, ಅವಳ ಗೆಳತಿಯೊಂದಿಗೆ ಗುಡ್ಡದ ತುದಿಗೆ. ನನ್ನನ್ನು ಕ೦ಡೊಡನೆ ಅವಳ ನಗು ಯಾಕೋ ಮ೦ದವಾಯಿತು. ಅನಿರೀಕ್ಷಿತವಾದುದೇನೋ ಕ೦ಡ೦ತೆ ನಿ೦ತಳು..

ನನ್ನ ಮನಸ್ಸು ಕೇಳಲಿಲ್ಲ. ಸನಿಹಕ್ಕೆ ಬಂದು ಕೇಳಿದೆ: "ಯಾಕೆ ಇತ್ತೀಚೆಗೆ ನೀನು ನನ್ನ ಜೊತೆ ಸರಿಯಾಗಿ ಮಾತನಾಡುತ್ತಿಲ್ಲ? ಏನಾಯಿತು?"

ನನ್ನ ಮಾತು ಇನ್ನೂ ಮುಗಿದಿರಲಿಲ್ಲ. ಅವಳು ಉತ್ತರವನ್ನು ಸಿದ್ಧಮಾಡಿಕೊಂಡು ಬಂದಿರುವಂತೆ ಉಲಿದಳು, "ನಿನ್ನ ಜೊತೆ ಮಾತು ಬೇಡ ಅನಿಸುತ್ತಿದೆ. ನನ್ನ ಜೊತೆ ಇನ್ನ್ಯಾವತ್ತೂ ಮಾತನಾಡಬೇಡ."

ಒಮ್ಮೆಲೇ ಬೀಸಿದ ಗಾಳಿಗೆ ನನ್ನ ದೇಹ ಅಲುಗಾಡಿತು, ಕದಲಿತು. ಕೈಕಾಲುಗಳ ಶಕ್ತಿ ಒಮ್ಮೆಲೇ ಉಡುಗಿದಂತಾಯಿತು. ಗಂಟಲು ಒಣಗಿ ಸೆರೆಯುಬ್ಬಿ ಬಂತು. ನಿಂತ ನೆಲ ಬಿರಿದ ಅನುಭವವಾಯಿತು. ಆಗಸದೆತ್ತರಕ್ಕೆ ಕಟ್ಟಿದ್ದ ಆಶಾಗೋಪುರ ತಲೆಯ ಮೇಲೇ ಕುಸಿದಂತಾಯಿತು. ಸವಿಕನಸೊಂದು ಫಕ್ಕನೆ ತನ್ನ ಮಗ್ಗಲು ಬದಲಿಸಿ ಪೂರ್ಣವಿರಾಮ ನೀಡಿತು. ಮಾತು ಹೊರಬರಲಿಲ್ಲ. ಕಣ್ಣುಗಳು ನಿಯಂತ್ರಣಕ್ಕೆ ಸಿಗದೇ ಮಂಜಾದವು. ಕಂಬನಿಯನ್ನು ಒರೆಸಿ ಅವಳ ಕಡೆ ನೋಡಿದರೆ, ಅವಳಾಗಲೇ ತನಗೇನೂ ಆಗಿಲ್ಲವೆಂಬ ತೆರದಿ ಗೆಳತಿಯೊಂದಿಗೆ ಹರಟುತ್ತ ಸಾಗುತ್ತಿದ್ದಳು.

ಅತ್ತ ರವಿ ತನ್ನನ್ನು ತಾನೇ ಪಶ್ಚಿಮದಲ್ಲಿ ಮುಳುಗಿಸಿಕೊಂಡಿದ್ದ. ಕತ್ತಲು ಆವರಿಸತೊಡಗಿತು. ನನ್ನ ಜೀವನದಲ್ಲಿ ಸಹ. ಅವಳ ಮುದ್ದುಮುಖ ಮತ್ತೆ ಮತ್ತೆ ಮುಂದೆ ಬಂದು ಅವಳ ಮಾತನ್ನು ಪದೇ ಪದೇ ಉಚ್ಚರಿಸಿ ಅಣಕಿಸುತ್ತಿತ್ತು. ಆ ರವಿಯ ತೆರದಿ ನಾನೂ ಅರ್ಥವಾಗದ ಭಾವನೆಗಳ ಸಮೂಹ ಸಾಗರದಲ್ಲಿ ಮುಳುಗೇಳತೊಡಗಿದೆ. ಭಾರವಾದ ಹೆಜ್ಜೆಗಳಿಗೆ ಸಂಗಾತಿಯಾಗಿ ಭಾರವಾದ ಮನಸ್ಸು ಬಿಟ್ಟರೆ ಮತ್ಯಾರೂ ಇರಲಿಲ್ಲ.

ಹನಿಮಳೆ - ಮಳೆಹನಿ

ಒಲವಿನ ಹನಿಮಳೆ ಸುರಿಸುರಿದು ಕೆನ್ನೆ ತೋಯಿಸಿದೆ... ಮುಂಗಾರಿನ ಮಳೆಹನಿ ಮನವ ತಣಿಸಿದೆ..