Search This Blog

Sunday, 3 January 2021

ರಾಮಜ್ಜ

ರಾಮಜ್ಜನ ಸರಳ ಮಾತು 
ಕೆಲವರಿಗೆ ಅರ್ಥವಾಗದ್ದು, 
ಹಲವರಿಗೆ ಅನರ್ಥವಾಗದ್ದು
ಸ್ವಾರ್ಥವಿಲ್ಲದ ಸ್ವ ಅರ್ಥದ್ದು!!!

ತಲೆ ಸರಿ ಇರುವವರು ಹೇಳಿದ್ದುಂಟು
ಅವನಿಗೆ ತಲೆ ಸರಿಯಿಲ್ಲವೆಂದು
ರಾಮಜ್ಜ ಕಪ್ಪುಮಸಿಯ ಲೇಖಕ
ಗೋಡೆಯೆಂಬ ಬಿಳಿಹಲಗೆಯ ಮೇಲೆ

ಕವಳ ಸಂಚಿಯ ಒಂದು ಖಾನೆ
ಮಸಿ ಇಂಗಾಳಕ್ಕೇ ಮೀಸಲು
ಬಸ್ ಸ್ಟಾಂಡ್ ಹಿಂಬದಿಯ ಗೋಡೆ
ಇವನ ಹಸ್ತಪ್ರತಿಯ ಸ್ವಸ್ಥಾನ

ಇದ್ದದ್ದು ಇರದು ಇಲ್ಲದ್ದು ಇರಲಾರದ್ದು
ರಾಮಜ್ಜನ ಚರ್ವಿತ ಚರ್ವಣ
ಹೊನ್ನ ಬಚ್ಚಿಟ್ಟರೇನು? ಕನ್ನ ಹಾಕುವರುಂಟು
ನಶ್ವರಕ್ಕೇಕೆ ಇರುವವರ ಚಿಂತೆಯೆಂದು

ಡಬ್ಬದಲ್ಲಿ ಏನೆಸೆದರೂ ಸದ್ದಾಗುವುದು 
ಮನಸ್ಸೆಂಬ ಡಬ್ಬದಲ್ಲಿ ಅಸೂಯೆಯ ಸದ್ದು
ಬೇರೆಯವರ ಸುದ್ದಿ ಬಿದ್ದಷ್ಟೂ
ಹಿಗ್ಗುವ ಮನಸಲಿ ಹೊಸ ಹೊಸ ಸದ್ದು

ಅವನ ಹೆಂಡತಿಗಿಂತ ತನ್ನ ಹೆಂಡತಿ ಚಂದ
ಅವನ ಮನೆ ಹಳೆಯದು, ಮಗನಿಗೆ ವಿದ್ಯೆಯಿಲ್ಲ
ಇವನ ಡಬ್ಬದಲಿ ಸದ್ದಿನ ದಿಂಗಿಣ
ಇವನ ಮಾತು ಕೇಳದ ಮಗಳು ಲೆಕ್ಕಕ್ಕಿಲ್ಲ

ರಾಮಜ್ಜನ ಐಡಿಯಾ ಡಬ್ಬಿ ಸುಣ್ಡಬ್ಬಿಯಂತೆ
ಹೊರಗೆ ಲಕಲಕ ಹೊಳಪಿನ ಸ್ಟೀಲು
ಒಳಗೆ ಕಪ್ಪಾಗಿದೆ ಬಾಂದ್ರಿಯ ವಾಸನೆ
ಸಂಭಾವಿತನ ಮನಸಿನ ಸ್ವಭಾವ

ರಾಮಜ್ಜ ಹೇಳುವುದಿಷ್ಟೇ, ಹಿಗ್ಗಬೇಡ!!
ನಿನ್ನ ನೋಡಿ ಹಿಗ್ಗುವರುಂಟು
ಇರದ ಬದುಕಿನಲ್ಲಿ ಇರಲಾರದ್ದು ಬಂದು
ಷಡ್ವೈರಿಗಳ ಕೇಕೆ ಡಬ್ಬದ ಸದ್ದಿನಲ್ಲಿ


ಎಮ್ಮೋಜಿ

ಮಾತು ಬೆಳ್ಳಿ
ಮೌನ ಬಂಗಾರ
ಈಗ ಮಾತೆಲ್ಲ ಕಡಿಮೆ
ಬರೀ ಸಂದೇಶಗಳು

ಅಕ್ಷರಕ್ಕೀಗ ಕಡಿಮೆ ಬೆಲೆ
ಎಮೋಷನ್ನಿಗೇ ಮಣೆ
ಎಲ್ಲೆಂದರಲ್ಲಿ
ಎಮೋಜಿಗಳದ್ದೇ ದರಬಾರು

ನಗು-ಅಳು ಸಿಟ್ಟು-ಪ್ರೀತಿ
ನಾಚಿಕೆ-ಹುಸಿನಗು ಖುಷಿ
ಪೆಚ್ಚುಮೋರೆ ಎಲ್ಲವೂ
ಹಳದಿ ಮುಖವಾಡ ತೊಟ್ಟಿವೆ

ಎಲ್ಲರೂ ಮುಖವಾಡ
ತೊಟ್ಟವರೇ
ಮನಸಿನ ಕನ್ನಡಿ
ತೋರುವುದಿಲ್ಲ

ಒಬ್ಬನ ಹಳದಿ ಮುಖ
ಮತ್ತೊಬ್ಬನಿಗೂ ಹಳದಿಮಯ
ಮಾತು ಮಾಯವಾಗಿ
ಲೋಕಕ್ಕೆಲ್ಲಾ ಕಾಮಾಲೆ

ಒಬ್ಬ ಹಲ್ಲು ತೋರಿ
ನಗುವವ
ಮತ್ತೊಬ್ಬ ಹಲ್ಲುಬ್ಬಿ
ಕೈ ಮುಚ್ಚಿ ನಗುವವ

ಅಳುವವರದೂ
ತರಹೇವಾರಿ
ಕಣ್ಣೀರಿನ ಹೊಳೆ ಹಲವರದು
ಕೆಲವರದು ಒಕ್ಕಣ್ಣಿನ ದುಃಖ

ಹಳೆಯ ಮಾತಿತ್ತು
ಕಣ್ಣಿದ್ದೂ ಕುರುಡರು
ಕಂಡೂ ತಿಳಿದೂ
ತಪ್ಪು ಮಾಡುವರೆಂದು

ಈಗೆಲ್ಲ ಅಕ್ಷರ
ಕಲಿಯುವ ಹಂಗಿಲ್ಲ
ಕಲಿತವರೂ ಸಹ
ನಿರಕ್ಷರಕುಕ್ಷಿಗಳಂತೆ

-ನಾರಾಯಣ ಗಾಂವ್ಕರ್

ಇಸ್ಪೀಟು

ರಾಜ ರಾಣಿಯರಿಗೆ
ಗುಲಾಮ ಬೇಕೇ ಬೇಕು

ಅವರ ಜಾತಿಯೇ ಆಗಬೇಕು
ವರ್ಣ ಧರ್ಮ ಮೀರುವಂತಿಲ್ಲ

ರಾಜರ ಹರಟೆ
ರಾಣಿಯರ ಪಟ್ಟಂಗ
ಗುಲಾಮರ ಮಾತುಕತೆ
ಆದರೂ ಅದು ಅಡ್ಡವೇ!!

ಮೂರು ಸಂಖ್ಯೆಯ
ಸೀರಿಯಲ್ಲು ಕಲಿತರೆ ಸಾಕು
ವರ್ಣ ಧರ್ಮ ಕಂಪಲ್ಸರಿ
ಆಟ ಗೆಲ್ಲುವುದಕ್ಕೆ

ದಾಡೆ ಪೀಡಕರಿಗೆಲ್ಲ
ಗುಲಾಮನೇ ದೊಡ್ಡವ
ಗಟ್ಟಿ ತುರ್ಪಿದ್ದರೆ
ಆಟಕ್ಕೆ ಹುರುಪು

ಮೇಲ್ಜಾತಿ ಕೆಳಜಾತಿ
ಹಳೆತಲೆಗಳ ಟ್ರಂಪಿನಲ್ಲಿ
ಕಳಾವರ ಎಷ್ಟಿದ್ದರೂ
ಅಷ್ಟಕಷ್ಟೇ!!!

ಎಲ್ಲ ಜಾತಿಯವರ
ಕೂಡಿಸಿ ಗಟ್ಟಿಯಿದ್ದವರು
ಟ್ರಂಪ್ ಆಗುತ್ತಾರೆ
ಆಟ ಅವರದೇ

ಮಕ್ಕಳ ಜೊತೆ
ಮಕ್ಕಳಾಗಿ
ಕತ್ತೆಯಾದರೂ
ಚಿಂತೆಯಿಲ್ಲ

ದೊಡ್ಡತನ 
ತೋರಿದರೆ
ಹೊಡೆತ ತಿನ್ನುವುದು 
ಗ್ಯಾರಂಟಿ!

ಬದುಕಿನ ಆಟಕ್ಕೂ
ಬಹಳ ವ್ಯತ್ಯಾಸವಿಲ್ಲ
ಏನೆಂದರೂ
ಅದೃಷ್ಟ ಬೇಕೇ ಬೇಕು!

-ನಾರಾಯಣ ಗಾಂವ್ಕರ್

ನೀ ಬರುವೆ

ವರ್ಷ ಋತುವಿನ ಪರ್ವ
ಸುತ್ತ ಮಂಜಿನ ಮುಸುಕು
ಚಂದ್ರನಾ ಮೊಗ ಮುಚ್ಚಿರಲು
ಕಾದಿರುವೆ ನೀ ಬರುವೆಯೆಂದು

ಸಂಜೆ ಮಂಜಿನ ತಂಪು
ನಾಸಿಕದಿ ಅಲೆಯಂತೆ
ಉಸಿರಿನಲಿ ಬೆರೆತಿರಲು
ಕಾದಿರುವೆ ನೀ ಬರುವೆಯೆಂದು

ಸುಮಗಂಧ ಉಸಿರಿನಲಿ
ಹಸಿರ ಕಸಿ ಕಂಗಳಲಿ
ಬೆರೆಸಿ ಪ್ರೀತಿಯ ಸಿಹಿಯ
ಕಾದಿರುವೆ ನೀ ಬರುವೆಯೆಂದು

ಮೆಲ್ಲ ಬೀಸುವ ಗಾಳಿ
ಕೊಂಚವೇ ಸುರಿವ ಮಳೆ
ಹಸಿರೆಲೆಯು ತಲೆದೂಗಿರಲು
ಕಾದಿರುವೆ ನೀ ಬರುವೆಯೆಂದು

ಸಂಜೆಯೆದ್ದ ತಾರೆಗಳೂ
ನಿದ್ದೆ ಮಂಪರಿನಲ್ಲಿ
ಒಲವಿನಾ ಕಣ್ಬಿಟ್ಟು ನಾ
ಕಾದಿರುವೆ ನೀ ಬರುವೆಯೆಂದು

ನಿಶೆ ಹರಿದು ಬೆಳಗಾಯ್ತು
ಹರಡಿದ ತಾರೆಗಳ್ ಸರಿದು
ರವಿಯೂ ಒಬ್ಬಂಟಿಯಾಗಲು
ಕಾದಿರುವೆ ನೀ ಬರುವೆಯೆಂದು

ನಿತ್ಯ ಅರಳುವ ಕುಸುಮ
ಸಂಜೆಯಲಿ ಬಾಡುತಿದೆ
ಕಾವ್ಯ ಚಿರನೂತನವೆನುತ
ಕಾದಿರುವೆ ನೀ ಬರುವೆಯೆಂದು