ಹೊತ್ತು ಮುಸ್ಸಂಜೆಯಲಿ
ಮುತ್ತು ಮಳೆಹನಿಯಂತೆ
ಮತ್ತೆ ಹರಡಿದೆ ಸುತ್ತ
ಅವಳ ನೆನಪು
ಕತ್ತಲಾಗುವ ಮುನ್ನ
ಚಿತ್ತಕಾಗಿದೆ ನಿಶೆಯು
ಹೊತ್ತು ಗೊತ್ತೆಂಬುದಿಲ್ಲ
ಅವಳ ನೆನಪು
ಅಂಗಳದ ತೋಟದಲಿ
ಸಪ್ತ ಸ್ವರ ಹೊಮ್ಮುತಿದೆ
ಸುಮ ಭ್ರಮರದಾಟದಲಿ
ಅವಳ ನೆನಪು
ಶರದ ಋತುವಿನ ಶೀತ
ಕರವ ತಂಪಾಗಿಸಲು
ಬಿಸಿಯುಸಿರು ಬೇಕಿನಿಸೆ
ಅವಳ ನೆನಪು
ಭಾನು ಬಾನಂಚಲ್ಲಿ
ಭುವಿಗೆ ಮುತ್ತಿಕ್ಕುತ್ತಿರೆ
ನಾಚಿಕೆಯ ಕುರುಹಲ್ಲಿ
ಅವಳ ನೆನಪು
ವಸುಮತಿಯೆ ನಾಳೆ ನಾ
ಹೊನ್ನ ವಸನವ ತರುವೆ
ತರಣಿ ಧರೆಗಿತ್ತ ವಚನ
ಅವಳ ನೆನಪು
ಪೂರ್ಣಿಮೆಯ ಶಶಿ ತಾನು
ಪೂರ್ಣರೂಪವ ಪಡೆಯೆ
ತಾರೆಯರ ಸರಸದಲಿ
ಅವಳ ನೆನಪು
ನೆನಪಿನಲೆ ತೂಕಡಿಸಿ
ನೆನಪಿರದೆ ಒರಗಿದೆನು
ಅವಳ ಕನಸಿಗೆ ನೆಪವು
ಅವಳ ನೆನಪು
ಬೇಗ ಬೆಳಗಾಗದಿರ-
ಲೆಂದು ಮುಲುಗಿದೆನು
ನೆನಪಿಗಂ ಮೇಲಿಹುದು
ಅವಳಿರುವ ಕನಸು
-ನಾರಾಯಣ ಗಾಂವ್ಕರ್