Search This Blog

Friday, 17 March 2017

ನೆನಪಿನೋಕುಳಿ

ನಿನ್ನ ವದನವ
ಕಣ್ತುಂಬ ಮನದುಂಬಿ
ಈಕ್ಷಿಸುವಾಸೆಯಲಿ
ನಾನಿರಲು,
ನೀ ಕೈ ಎತ್ತಿ
ಗುದ್ದುವ ಪರಿಯ
ನೆನೆಯುತ್ತಿರುತ್ತೇನೆ

ಬೈಕಿನಲಿ ಜೊತೆಯಲಿ
ಪಯಣದ ಕಾಲದಲಿ
ಕಾಡ ದಾರಿಯಲಿ
ನೆಲ್ಲಿಮರ ನೇರಳೆಮರ
ಸಿಗಲೆಂದು ಮನದಿ
ಅಂದುಕೊಳ್ಳುತ್ತಿರುತ್ತೇನೆ

ಮುಸ್ಸಂಜೆಯಲಿ
ಪಕ್ಕ ನಿಂತು ನಗುವ
ಸೂಸುತ ನೀನಿರಲು
ಚಂದ್ರನ ಮತ್ತೆ ಮತ್ತೆ
ನೋಡುವಂತಾಗಲೆಂದು
ಆಸೆ ಪಡುತ್ತಿರುತ್ತೇನೆ

ನೀ ಸಿಹಿಯ ತುಂಬಿ
ಕಷಾಯ ಈಯಲು
ಮೇಲೆ ಮೂಡುವ
ಕೆನೆ ಪದರ
ನನ್ನ ತುಟಿಗಂಟಲೆಂದು
ಅಂದುಕೊಳ್ಳುತ್ತಿರುತ್ತೇನೆ

ಗುಂಪಿನಲಿ
ಹಿಂದಿನ ಸಾಲಿನಲಿ
ನಿಂತು ನಿನ್ನ
ಬಿಡುಗೂದಲ
ತುದಿಯ ಮೆಲ್ಲನೆ
ಎಳೆಯಲು
ಕಾಯುತ್ತಿರುತ್ತೇನೆ

ನಿಸರ್ಗದ
ಸೌಂದರ್ಯವ ನೀ
ಭಾವುಕಳಾಗಿ
ಸವಿಯುವ
ಆ ಪರಿಯ
ಮತ್ತೆ ಮತ್ತೆ ನೋಡಲು
ಕಾತರಿಸುತ್ತಿರುತ್ತೇನೆ

ಸಣ್ಣನೆ ಚಳಿಯಲ್ಲಿ
ನೀ ನನ್ನ ಎದೆಗೊರಗಿ
ಬಿಸಿ ಅಪ್ಪುಗೆಯ
ನೀಡಲು
ಮನ ಅರಳಿ
ಹೂವಾಗುವುದ
ಕಣ್ಮುಚ್ಚಿ
ಅನುಭವಿಸುತ್ತಿರುತ್ತೇನೆ

ಬೈಕಿನಲಿ ಜೊತೆ
ಅಂಟಿದಂತೆ
ಕುಳಿತಾಗ
ಪಯಣ
ನಿರಂತರವಾಗಿರಲೆಂದು
ಆಶಿಸುತ್ತಿರುತ್ತೇನೆ

ಕಂಗಳ ಬತ್ತಳಿಕೆಯೊಂದ
ರೆಪ್ಪೆಗಳನ್ನೊಮ್ಮೆ ಮುಚ್ಚಿ
ಆ ಕರಿಹುಬ್ಬ
ಬಾಗಿಸಿ ನೀ
ಬಿಡುವ ನೋಟದ ಬಾಣ
ಉರಕೆ ತಾಗಲೆಂದು
ಕಾಯುತ್ತಿರುತ್ತೇನೆ

ಮಧುರ ಮಧು
ತುಂಬಿದ ಪುಟ್ಟ
ಅಧರಗಳ
ಹೀರಿ ತೆಗೆದಷ್ಟೂ
ಮಧು ಅಕ್ಷಯವಾಗಲೆಂದು
ಮುಲುಗುತ್ತಿರುತ್ತೇನೆ

ಫೋನಿನಲಿ
ಅಲೆಗಳು
ನಾನಿತ್ತ ಮುತ್ತ
ನಿನ್ನತ್ತ ಸೇರಿಸುವಾಗ
ತುಟಿಯ ಕೆಂಬಣ್ಣ
ನಿನ್ನ ಕೆನ್ನೆಗೂ
ಬಂತೇನೋ ಎಂದು
ಭಾವಿಸುತ್ತಿರುತ್ತೇನೆ

ನನ್ನ ನಿನ್ನ
ಜೀವನ ಒಂದಾಗುವ
ಕಾಲ ಸನಿಹ
ಬರುತ್ತಿರುವಾಗ
ಯಾವತ್ತೂ
ಆ ನಿರ್ಮಲ
ಪ್ರೀತಿಗಾಗಿ
ಹಂಬಲಿಸುತ್ತಿರುತ್ತೇನೆ